
ಭಟ್ಕಳ: ದೇಹದಾರ್ಢ್ಯ ಕ್ರೀಡಾಪಟುಗಳಿಗಾಗಿ ರಾಜ್ಯಮಟ್ಟದ ಸ್ಪರ್ಧೆಯನ್ನು ಫೆಬ್ರವರಿ 22ರಂದು ನಗರದಲ್ಲಿರುವ ಆನಂದಾಶ್ರಮ ಶಾಲೆಯ ಮೈದಾನದಲ್ಲಿ ಆಯೋಜಿಸಲಾಗಿದೆ. ಸಂಜೆ 6 ಗಂಟೆಗೆ ಆರಂಭವಾಗಲಿರುವ ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 300ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಎಂಟು ವಿಭಾಗಗಳಲ್ಲಿ ಸ್ಪರ್ಧೆ:
ಒಟ್ಟು ಎಂಟು ವಿಭಿನ್ನ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಅನುಭವಿಗಳಿಗೂ ಹೊಸಬರಿಗೂ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ವೇದಿಕೆ ಸಿಗಲಿದೆ. ಕಾರ್ಯಕ್ರಮದ ಆಯೋಜನೆಗೆ ಅಗತ್ಯ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಅನುಭವಿ ತೀರ್ಪುಗಾರರ ನಿಯೋಜನೆ:
ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಾಡಿಬಿಲ್ಡಿಂಗ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯ್ಕ, ಸ್ಪರ್ಧೆಯನ್ನು ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಉದ್ದೇಶದಿಂದ ರಾಜ್ಯದ ವಿವಿಧ ಭಾಗಗಳಿಂದ 25ರಿಂದ 30 ಮಂದಿ ಅನುಭವಿ ರೆಫ್ರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ದೆಹದಾರ್ಢ್ಯ ಕ್ರೀಡೆಯ ಮಹತ್ವ, ಆರೋಗ್ಯಕರ ಜೀವನಶೈಲಿ ಮತ್ತು ಶಿಸ್ತಿನ ತರಬೇತಿಯ ಅಗತ್ಯತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಸ್ಪರ್ಧೆಯ ಪ್ರಮುಖ ಉದ್ದೇಶ ಎಂದು ಅವರು ಹೇಳಿದರು. ಸಚಿವ ಮಂಕಾಳ ವೈದ್ಯ ಅವರ ಸಹಕಾರದಿಂದ ತಾಲೂಕಿನಲ್ಲಿ ರಾಜ್ಯಮಟ್ಟದ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದೂ ವಿವರಿಸಿದರು.

ಗಣ್ಯರ ಉಪಸ್ಥಿತಿ
ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಜಿಜುರ್ ರಹಮಾನ್, ಗೌರವಾಧ್ಯಕ್ಷ ನಜೀರ ಕಾಶಿಮ್ ಜಿ, ಸದಸ್ಯರಾದ ಗಣೇಶ ನಾಯ್ಕ, ಫಾಸ್ಕಲ್ ಗೋಮ್ಸ್, ರಾಘವೇಂದ್ರ ಗೊಂಡ, ವಿವೇಕ ನಾಯ್ಕ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಇತರ ಗಣ್ಯರು ಹಾಜರಿದ್ದರು.ರಾಜ್ಯಮಟ್ಟದ ಈ ಕ್ರೀಡಾಕೂಟ ಭಟ್ಕಳದಲ್ಲಿ ದೇಹದಾರ್ಢ್ಯ ಕ್ರೀಡೆಗೆ ಉತ್ತೇಜನ ನೀಡುವ ಪ್ರಮುಖ ವೇದಿಕೆಯಾಗಿ ರೂಪುಗೊಳ್ಳಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
