
ಭಟ್ಕಳ: ಕಾಡುಪ್ರಾಣಿ ಹತ್ಯೆ ನಡೆದಿರಬಹುದೆಂಬ ಮಾಹಿತಿಯ ಆಧಾರದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ತಾಲೂಕಿನ ಹುರುಳಿಸಾಲ ಪ್ರದೇಶದಲ್ಲಿನ ಮನೆೊಂದರಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಶಂಕಿತ ಮಾಂಸ, ಜಿಂಕೆ ಕೊಬ್ಬು ಹಾಗೂ ಎರಡು ಏರ್‌ಗನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಅಧಿಕಾರಿಗಳ ಪ್ರಾಥಮಿಕ ಮಾಹಿತಿಯಂತೆ, ಶೋಧದ ವೇಳೆ ಮನೆಯ ಫ್ರಿಡ್ಜ್‌ನಲ್ಲಿ ಸುಮಾರು 21 ಕೆಜಿ ಮಾಂಸ ಸಂಗ್ರಹಿಸಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆ ಸಮೀಪದ ಪಾಳುಬಿದ್ದ ಬಾವಿಯಲ್ಲಿ ಪ್ರಾಣಿಯ ಅವಶೇಷಗಳಿರುವುದಾಗಿ ತಿಳಿದುಬಂದ ಹಿನ್ನೆಲೆಯಲ್ಲಿ, ಅವುಗಳನ್ನು ಹೊರತೆಗೆದು ಪರಿಶೀಲನೆ ನಡೆಸಲಾಗಿದೆ.
ಬಾಗಿಲು ತೆರೆಯಲು ವಿಳಂಬ
ಕಾರ್ಯಾಚರಣೆ ವೇಳೆ ಮನೆ ಒಳಗೆ ಪ್ರವೇಶಿಸಲು ಅಧಿಕಾರಿಗಳು ಪ್ರಯತ್ನಿಸಿದಾಗ ಆರಂಭದಲ್ಲಿ ಸಹಕಾರ ದೊರಕಲಿಲ್ಲ ಎನ್ನಲಾಗಿದೆ. ಸುಮಾರು ಆರು ಗಂಟೆಗಳ ನಿರೀಕ್ಷೆಯ ಬಳಿಕ ಮನೆ ಪರಿಶೀಲನೆಗೆ ಅವಕಾಶ ಸಿಕ್ಕಿದ್ದು, ಬಳಿಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಾಂಸದ ಮಾದರಿ ಪ್ರಯೋಗಾಲಯಕ್ಕೆ
ಈ ಕುರಿತು ಪ್ರತಿಕ್ರಿಯಿಸಿದ ಅರಣ್ಯ ವಲಯಾಧಿಕಾರಿ (RFO) ವಿಶ್ವನಾಥ ಅವರು, “ಪತ್ತೆಯಾದ ಮಾಂಸವು ಮೇಲ್ನೋಟಕ್ಕೆ ಕಾಡುಪ್ರಾಣಿಗೆ ಸೇರಿರಬಹುದೆಂಬ ಶಂಕೆ ಇದೆ. ದೃಢೀಕರಣಕ್ಕಾಗಿ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಸ್ಪಷ್ಟತೆ ಸಿಗಲಿದೆ” ಎಂದು ತಿಳಿಸಿದ್ದಾರೆ.

ಶೋಧ ಮುಂದುವರಿಕೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿ ಜಾಫರ್ ಬ್ರಹ್ಮಾವರ ವಿರುದ್ಧ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಲು ಶೋಧ ಕಾರ್ಯ ಮುಂದುವರಿಸಲಾಗಿದೆ ಎಂದು ತಿಳಿದುಬಂದಿದೆ.ಕಾರ್ಯಾಚರಣೆಯಲ್ಲಿ ನಗರ ಠಾಣೆಯ ಸಿಪಿಐ ದಿವಾಕರ ಪಿ.ಎಂ., ಪಿಎಸ್ಐ ನವೀನ್ ನಾಯ್ಕ, ಗ್ರಾಮೀಣ ಠಾಣೆಯ ಪಿಎಸ್ಐ ಮಲ್ಲಿಕಾರ್ಜುನ, ಡಿಆರ್‌ಒಎಫ್ ಸಿಬ್ಬಂದಿಗಳಾದ ಮಾರುತಿ, ಸಂದೀಪ್ ಸೇರಿದಂತೆ ಧನಂಜಯ ಮೊಗೇರ ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರು.

ಸೂಚನೆ: ಪ್ರಯೋಗಾಲಯ ವರದಿ ಬಂದ ಬಳಿಕವೇ ಪತ್ತೆಯಾದ ಮಾಂಸದ ಸ್ವರೂಪ ಹಾಗೂ ಆರೋಪಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

