ಭಟ್ಕಳ: ಆರ್.ವಿ. ದೇಶಪಾಂಡೆ ಅವರು ಬುಧವಾರ ಖಾಸಗಿ ಕಾರ್ಯಕ್ರಮದ ನಿಮಿತ್ತ ಭಟ್ಕಳಕ್ಕೆ ಆಗಮಿಸಿ, ಸ್ಥಳೀಯ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದರು. ಅವರ ಆಗಮನದ ವೇಳೆ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಹಾರಹಾಕಿ ಆತ್ಮೀಯವಾಗಿ ಸ್ವಾಗತಿಸಿದರು.ಸ್ವಾಗತ ಸಮಾರಂಭದಲ್ಲಿ ಮಾಜಿ ಶಾಸಕ ಜೆ.ಡಿ. ನಾಯ್ಕ್, ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾವಂಕರ್ ಹಾಗೂ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹಂಗಾಮಿ ಲಾಗಣಿ ಭೂಮಿ ಮತ್ತು ಅರಣ್ಯ ಅತಿಕ್ರಮಣ ವಿಚಾರ ಪ್ರಸ್ತಾಪ:
ಪ್ರವಾಸಿ ಮಂದಿರದಲ್ಲಿ ನಡೆದ ಚರ್ಚಾ ಸಭೆಯಲ್ಲಿ, ತಾಲೂಕಿನಲ್ಲಿ ಇರುವ ಹಂಗಾಮಿ ಲಾಗಣಿ ಭೂಮಿ ಹಾಗೂ ಅರಣ್ಯ ಅತಿಕ್ರಮಣದಾರರ ಸಮಸ್ಯೆಯನ್ನು ಮಾಜಿ ಶಾಸಕ ಜೆ.ಡಿ. ನಾಯ್ಕ್ ಅವರು ದೇಶಪಾಂಡೆ ಅವರ ಗಮನಕ್ಕೆ ತಂದರು. ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ದೇಶಪಾಂಡೆ ಅವರು ತಕ್ಷಣವೇ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಕಾಂಗ್ರೆಸ್ ಸಂಘಟನೆ ಕುರಿತು ಚರ್ಚೆ:
ಇದೇ ಸಂದರ್ಭದಲ್ಲಿ ಮಂಕಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ವಿಚಾರವೂ ಪ್ರಸ್ತಾಪಕ್ಕೆ ಬಂತು. ತಾಲೂಕಿನಲ್ಲಿ ಪಕ್ಷದ ಸಂಘಟನಾ ಬಲವರ್ಧನೆ ಕುರಿತು ದೇಶಪಾಂಡೆ ಅವರು ಸ್ಥಳೀಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಸಂಘಟನಾ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು.

ಹಲವು ಮುಖಂಡರ ಉಪಸ್ಥಿತಿ:
ಸಭೆಯಲ್ಲಿ ತಾಲೂಕು ಅರಣ್ಯ ಭೂಮಿ ಸಾಗುವಳಿದಾರರ ಸಂಘದ ಅಧ್ಯಕ್ಷ ರಾಮಾ ಮೊಗೇರ, ಡಿ.ಸಿ.ಸಿ ಅಧ್ಯಕ್ಷ ಸಾಯಿ ಗಾವಂಕರ್, ತಂಜಿಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ದೀಪಕ್ ದೊಡ್ಡೂರು ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
