
ಭಟ್ಕಳ :ಭಟ್ಕಳ ಪುರಸಭೆ ಮತ್ತು ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಬಾಕಿ ಬಿಲ್ ಬಿಡುಗಡೆ ಆಗದೆ ವಿಳಂಬವಾಗುತ್ತಿರುವುದಾಗಿ ಸಾಮಾಜಿಕ ಹೋರಾಟಗಾರ ಹಾಗೂ ಗುತ್ತಿಗೆದಾರ ಕಿರಣ ಶಿರೂರು ತಿಳಿಸಿದ್ದಾರೆ.ತಮ್ಮ ಪ್ರಕಟಣೆಯಲ್ಲಿ ಅವರು, ಸುಮಾರು ಹತ್ತು ತಿಂಗಳ ಹಿಂದೆ ಪೂರ್ಣಗೊಂಡ ಕಾಮಗಾರಿಗಳಿಗೂ ಇನ್ನೂ ಪಾವತಿ ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಆರ್ಥಿಕ ಒತ್ತಡ ಎದುರಿಸುತ್ತಿದ್ದು, ಸಾಲದ ಮೊತ್ತವನ್ನು ಮರುಪಾವತಿಸಲು ಕಷ್ಟವಾಗುತ್ತಿದೆ ಎಂದು ವಿವರಿಸಿದ್ದಾರೆ.
ಸುಮಾರು ರೂ. 7 ಲಕ್ಷ ಮೊತ್ತದ ಕಾಮಗಾರಿಗಳನ್ನು ಭಟ್ಕಳ ಮತ್ತು ಜಾಲಿ ವ್ಯಾಪ್ತಿಯಲ್ಲಿ ಕೈಗೊಂಡಿರುವುದಾಗಿ ತಿಳಿಸಿರುವ ಅವರು, ಕಾಮಗಾರಿ ಪೂರ್ಣಗೊಳಿಸಲು ಸಾಲ ಪಡೆದಿದ್ದಾಗಿ ತಿಳಿಸಿದ್ದಾರೆ.

ಬಿಲ್ ಪಾವತಿ ವಿಳಂಬವಾಗುತ್ತಿರುವುದರಿಂದ ಸಾಲಗಾರರಿಂದ ಒತ್ತಡ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿ ಪೌರಾಡಳಿತ ಇಲಾಖೆ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅನುದಾನ ಬಿಡುಗಡೆಯ ವಿಳಂಬವೇ ಪಾವತಿ ಸಮಸ್ಯೆಗೆ ಕಾರಣ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿರುವುದಾಗಿ ಅವರು ಹೇಳಿದ್ದಾರೆ.
ಇದೇ ವೇಳೆ, ಹೊಸ ಸಾಲಿನ ಅನುದಾನ ಪೂರ್ಣವಾಗಿ ಬಿಡುಗಡೆಯಾಗುವ ಮೊದಲು ಕೆಲವು ಸ್ಥಳಗಳಲ್ಲಿ ಟೆಂಡರ್ ಪ್ರಕ್ರಿಯೆ ಆರಂಭವಾಗುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಲಾಗಿದೆ

ಸಾಂಕೇತಿಕ ಧರಣಿ
ಬಾಕಿ ಬಿಲ್ ಪಾವತಿಗೆ ಸಂಬಂಧಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಫೆಬ್ರವರಿ 27ರಂದು ಭಟ್ಕಳ ಪುರಸಭೆ ಕಚೇರಿ ಎದುರು ಶಾಂತಿಯುತ ಸಾಂಕೇತಿಕ ಧರಣಿ ನಡೆಸಲಾಗಿದೆ. ಮುಂದಿನ ಹತ್ತು ದಿನಗಳಲ್ಲಿ ಸಮಸ್ಯೆಗೆ ಪರಿಹಾರ ದೊರಕದಿದ್ದಲ್ಲಿ ಹೋರಾಟವನ್ನು ಮುಂದುವರಿಸುವ ಸಾಧ್ಯತೆ ಇದೆ ಎಂದು ಕಿರಣ ಶಿರೂರು ತಿಳಿಸಿದ್ದಾರೆ.
