
ಭಟ್ಕಳ:ಉತ್ತರ ಕನ್ನಡದ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರು ಮತ್ತೆ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಕಳೆದ ಕೆಲವು ವಾರಗಳಿಂದ ಅವರ ಸಕ್ರಿಯ ರಾಜಕೀಯ ಪುನರಾಗಮನದ ಕುರಿತಾಗಿ ಊಹಾಪೋಹಗಳು ಕೇಳಿಬರುತ್ತಿದ್ದವು.ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಅವರು ಕೇಂದ್ರ ಸಚಿವರಾಗಿ ಸಹ ಸೇವೆ ಸಲ್ಲಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯ ವೇಳೆಯಲ್ಲಿ ಪಕ್ಷದೊಳಗಿನ ಬೆಳವಣಿಗೆಗಳ ಹಿನ್ನೆಲೆ ಅವರಿಗೆ ಟಿಕೆಟ್ ನೀಡಲಾಗಿರಲಿಲ್ಲ. ಚುನಾವಣಾ ಅವಧಿಯಲ್ಲಿಯೂ ಅವರು ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸದಿರುವುದು ಗಮನಸೆಳೆದಿತ್ತು. ಬಳಿಕ ಪಕ್ಷ ಸಂಘಟನಾ ಚಟುವಟಿಕೆಗಳಿಂದ ದೂರವಿದ್ದು, ತಮ್ಮ ಸಾರ್ವಜನಿಕ ಕಾರ್ಯಕ್ರಮಗಳಲ್ಲಿಯೂ ಪಕ್ಷದ ಗುರುತುಗಳ ಬಳಕೆ ಮಾಡದೇ ಮಿತವಾಗಿಯೇ ಮುಂದುವರಿದಿದ್ದರು.

ಇದೀಗ ಮಾರ್ಚ್ 8ರಂದು ಭಟ್ಕಳದಲ್ಲಿ ನಡೆಯಲಿರುವ ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಲು ಅವರು ಒಪ್ಪಿಕೊಂಡಿರುವುದು ರಾಜಕೀಯವಾಗಿ ಮಹತ್ವ ಪಡೆದಿದೆ. ಪ್ರಖರ ವಾಗ್ಮಿತ್ವಕ್ಕೆ ಪರಿಚಿತರಾದ ಹೆಗಡೆ ಅವರು ಸೂಕ್ಷ್ಮ ರಾಜಕೀಯ ಹಿನ್ನೆಲೆಯ ಭಟ್ಕಳದಲ್ಲಿ ಮಾತನಾಡಲಿರುವುದು ಬೆಂಬಲಿಗರಲ್ಲಿ ಕುತೂಹಲ ಮೂಡಿಸಿದೆ.ಕಳೆದ ಕೆಲವು ವರ್ಷಗಳಿಂದ ಅವರು ಸಕ್ರಿಯ ರಾಜಕಾರಣದಿಂದ ದೂರವಿದ್ದರೂ, ಲೋಕಸಭಾ ಚುನಾವಣೆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಕೆಲಕಾಲ ಅಭಿಪ್ರಾಯ ಹಂಚಿಕೊಂಡಿದ್ದರು. ನಂತರ ನ್ಯಾನೋ ತಂತ್ರಜ್ಞಾನ ಆಧಾರಿತ ಔಷಧೀಯ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದಾಗಿ ತಿಳಿದುಬಂದಿತ್ತು. ಕೆಲವು ಮಾಧ್ಯಮಗಳಲ್ಲಿ ತಮ್ಮ ಸಂಶೋಧನಾ ಯೋಜನೆಗಳ ಕುರಿತು ಮಾಹಿತಿ ನೀಡಿದ್ದರೂ, ಸಂಘಟನಾ ರಾಜಕಾರಣದಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ.

ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಸಂಘಟನಾ ವಲಯದ ಹಿರಿಯರೊಂದಿಗೆ ನಡೆದ ಮಾತುಕತೆಗಳ ಬಳಿಕವೇ ಅವರು ‘ಹಿಂದೂ ಸಂಗಮ’ ವೇದಿಕೆಗೆ ಬರಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಕಾರ್ಯಕ್ರಮದ ಅಂಗವಾಗಿ ಬೈಕ್ ರ್ಯಾಲಿ ಹಾಗೂ ಮೆರವಣಿಗೆಗಳ ಸಿದ್ಧತೆಗಳು ನಡೆಯುತ್ತಿವೆ ಎಂದು ಸಂಘಟಕರು ತಿಳಿಸಿದ್ದಾರೆ.ಒಟ್ಟಾರೆ, ಈ ಕಾರ್ಯಕ್ರಮವು ಹೆಗಡೆ ಅವರ ರಾಜಕೀಯ ಭವಿಷ್ಯಕ್ಕೆ ಹೊಸ ದಿಕ್ಕು ನೀಡುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ. ಅಧಿಕೃತ ರಾಜಕೀಯ ಘೋಷಣೆ ಏನೂ ಹೊರಬಂದಿಲ್ಲದಿದ್ದರೂ, ಭಟ್ಕಳದ ವೇದಿಕೆ ಮತ್ತೊಮ್ಮೆ ಅವರನ್ನು ಸಾರ್ವಜನಿಕ ಚರ್ಚೆಯ ಕೇಂದ್ರಬಿಂದುವಿಗೆ ತರುತ್ತಿದೆ.
