
ಭಟ್ಕಳ: ಹಿಂದೂ ಸಮ್ಮೇಳನ ಸಮಿತಿ, ಭಟ್ಕಳ ನಗರ ನೇತೃತ್ವದಲ್ಲಿ “ಭಟ್ಕಳ ನಗರ ಹಿಂದೂ ಸಂಗಮ” ಹೆಸರಿನಲ್ಲಿ ಮಾರ್ಚ್ 8, 2026ರಂದು ಭಟ್ಕಳ ನಗರದಲ್ಲಿ ಹಿಂದೂ ಸಮಾವೇಶ ಆಯೋಜಿಸಲಾಗಿದೆ. ಹಳೆ ಬಸ್ ನಿಲ್ದಾಣದ ಸಮೀಪದ ರಿಕ್ಷಾ ಚಾಲಕರ ಸಾರ್ವಜನಿಕ ಶ್ರೀ ಗಣೇಶೋತ್ಸವ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ತಿಳಿಸಿದ್ದಾರೆ.ಮಧ್ಯಾಹ್ನ 3.30ಕ್ಕೆ ಶೋಭಾಯಾತ್ರೆ ಆರಂಭವಾಗಲಿದ್ದು, ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭಕ್ಕೆ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ (ಶ್ರೀಧಾಮ, ಮಾಣಿಲ, ಬಂಟ್ವಾಳ) ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮುಖ್ಯ ಭಾಷಣಕಾರರಾಗಿ ಅನಂತ್ ಕುಮಾರ್ ಹೆಗಡೆ:
ಕಾರ್ಯಕ್ರಮದಲ್ಲಿ ಮುಖ್ಯ ದಿಕ್ಸೂಚಿ ಭಾಷಣಕಾರರಾಗಿ ಉತ್ತರ ಕನ್ನಡದ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಭಾಗವಹಿಸಲಿದ್ದಾರೆ. ಅವರ ಸಾರ್ವಜನಿಕ ವೇದಿಕೆಯ ಹಾಜರಾತಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಅವರು ಕೇಂದ್ರ ಸಚಿವರಾಗಿ ಸಹ ಸೇವೆ ಸಲ್ಲಿಸಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಒಳಗಿನ ಬೆಳವಣಿಗೆಗಳ ಹಿನ್ನೆಲೆ ಅವರಿಗೆ ಟಿಕೆಟ್ ನೀಡಲಾಗಿರಲಿಲ್ಲ. ನಂತರ ಅವರು ಸಂಘಟನಾ ಚಟುವಟಿಕೆಗಳಿಂದ ದೂರವಿದ್ದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಿತವಾಗಿ ಭಾಗವಹಿಸುತ್ತಿದ್ದರು.
ಇದೀಗ ಭಟ್ಕಳದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಭಾಷಣ ಮಾಡಲು ಒಪ್ಪಿಕೊಂಡಿರುವುದು ಗಮನಸೆಳೆದಿದೆ. ಪ್ರಖರ ವಾಗ್ಮಿತ್ವಕ್ಕೆ ಪರಿಚಿತರಾದ ಹೆಗಡೆ ಅವರ ಭಾಷಣವನ್ನು ಬೆಂಬಲಿಗರು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ.

ರಾಜಕೀಯವಾಗಿ ಮಹತ್ವದ ವೇದಿಕೆ?
ಕಳೆದ ಕೆಲವು ವರ್ಷಗಳಿಂದ ಸಕ್ರಿಯ ರಾಜಕಾರಣದಿಂದ ದೂರವಿದ್ದ ಹೆಗಡೆ ಅವರು, ಲೋಕಸಭಾ ಚುನಾವಣೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಕೆಲಕಾಲ ಅಭಿಪ್ರಾಯ ಹಂಚಿಕೊಂಡಿದ್ದರು. ನಂತರ ತಂತ್ರಜ್ಞಾನ ಆಧಾರಿತ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದಾಗಿ ತಿಳಿದುಬಂದಿತ್ತು.
ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಸಂಘಟನಾ ವಲಯದ ಮಾತುಕತೆಗಳ ಬಳಿಕವೇ ಅವರು ಈ ವೇದಿಕೆಗೆ ಬರಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಕಾರ್ಯಕ್ರಮದ ಅಂಗವಾಗಿ ಬೈಕ್ ರ್ಯಾಲಿ ಹಾಗೂ ಮೆರವಣಿಗೆಗಳ ಸಿದ್ಧತೆಗಳು ನಡೆಯುತ್ತಿವೆ ಎಂದು ಆಯೋಜಕರು ತಿಳಿಸಿದ್ದಾರೆ.ಒಟ್ಟಾರೆ, ಭಟ್ಕಳದಲ್ಲಿ ನಡೆಯಲಿರುವ ‘ಹಿಂದೂ ಸಂಗಮ’ ಸಮಾವೇಶವು ಜಿಲ್ಲೆಯ ರಾಜಕೀಯ ಚರ್ಚೆಗೆ ಹೊಸ ಚೈತನ್ಯ ನೀಡುವ ಸಾಧ್ಯತೆ ಇದೆ. ಅವರ ಮುಂದಿನ ರಾಜಕೀಯ ನಡೆಯ ಕುರಿತು ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ.
