
ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶಿಲ್ಪಾ ವಿಷ ಸೇವಿಸಿ ಆತ್ಮಹತ್ಯೆ

ಅಂಕೋಲಾ-ವಿದ್ಯಾರ್ಥಿನಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೆಳಂಬಾರದಲ್ಲಿ ನಡೆದಿದೆ.

ಬೆಳಂಬಾರ ತಾಳೇಬೈಲಿನ ನಿವಾಸಿ, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಶಿಲ್ಪಾ ಗೌಡ (17) ಮೃತ ದುರ್ದೈವಿ. ಈಕೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮಾ.9ರಿಂದ ಆರಂಭವಾಗಿರುವ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಆರಂಭದ ಎರಡು ವಿಷಯಗಳ ಪರೀಕ್ಷೆ ಎದುರಿಸಿದ್ದ ಈಕೆ, ಬುಧವಾರ ಬೆಳಿಗ್ಗೆ ಪಾಲಕರು ಎಂದಿನಂತೆ ಕೂಲಿ ಕೆಲಸಕ್ಕೆ ಮನೆಯಿಂದ ಹೊರಗಡೆ ಹೋಗಿದ್ದ ವೇಳೆ ಅದಾವುದೋ ಕಾರಣದಿಂದ ಮನನೊಂದು ವಿಷ ಸೇವಿಸಿದ್ದಾಳೆ.
ಕೆಲ ಹೊತ್ತಿನ ಬಳಿಕ ವಾಂತಿ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬರುತ್ತಿರುವ ವೇಳೆ ಕೊನೆಯುಸಿರೆಳೆದಿದ್ದಾಳೆ ಎನ್ನಲಾಗಿದೆ. ಈವರೆಗೂ ಸಾವಿಗೆ ನಿಖರವಾದ ಕಾರಣಗಳು ತಿಳಿದುಬಂದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಳು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

