ಭಟ್ಕಳ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿಚಾರವಾಗಿ ಸಚಿವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಟೀಕೆಗಳು ಹಾಗೂ ಆರೋಪಗಳು ಅನಾವಶ್ಯಕವೆಂದು ಮಂಕಿ ಬ್ಲಾಕ್ ಅಧ್ಯಕ್ಷ ಗೋವಿಂದ ನಾಯ್ಕ ಹೇಳಿದ್ದಾರೆ. ಕರಾವಳಿ ಉತ್ಸವದ ವೇದಿಕೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಈ ಯೋಜನೆ ಬಗ್ಗೆ ಪ್ರಸ್ತಾಪ ಮಾಡಿಲ್ಲ ಎಂದು ಸಚಿವರು ಈಗಾಗಲೇ ಸ್ಪಷ್ಟಪಡಿಸಿದ್ದರೂ, ಮತ್ತೆ ಮತ್ತೆ ಈ ವಿಚಾರವನ್ನು ಎತ್ತಿ ಸಚಿವರ ತೇಜೋವಧೆ ಮಾಡಲು ಕೆಲವರು ಮುಂದಾಗುತ್ತಿರುವುದು ಖಂಡನೀಯ ಎಂದು ಅವರು ಹೇಳಿದರು.

ಭಟ್ಕಳದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಹೊನ್ನಾವರದಲ್ಲಿ ನಡೆದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧದ ಪ್ರತಿಭಟನಾ ಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಒತ್ತಡ ಹೇರುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಸಭೆಯ ಉದ್ದೇಶವನ್ನು ತಪ್ಪು ದಿಕ್ಕಿಗೆ ತಿರುಗಿಸಲು ಕೆಲವರು ಸುಳ್ಳು ಆರೋಪಗಳನ್ನು ಮುಂದಿಟ್ಟಿದ್ದಾರೆ ಎಂದು ಆರೋಪಿಸಿದರು.ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಪ್ರಚಾರ ಶಾಶ್ವತವಾಗುವುದಿಲ್ಲ ಎಂದು ಹೇಳಿದ ಗೋವಿಂದ ನಾಯ್ಕ, ಸಚಿವ ಮಂಕಾಳ ವೈದ್ಯ ಹಲವು ವರ್ಷಗಳಿಂದ ಜನಸೇವೆ ಮೂಲಕ ಜನರ ವಿಶ್ವಾಸ ಗಳಿಸಿರುವ ನಾಯಕರು. ಇಂತಹ ಆರೋಪಗಳಿಂದ ಅವರ ಗೌರವಕ್ಕೆ ಧಕ್ಕೆ ತರುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.
ಸಚಿವರು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪಗಳನ್ನು ಮಾಡುವವರು ತಮ್ಮದೇ ಪಕ್ಷದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳಾದ ಇಡಿ ಅಥವಾ ಸಿಬಿಐಗೆ ಸ್ವಯಂ ಘೋಷಿತ ಬಿಜೆಪಿ ಮುಖಂಡ ಮಾಸ್ತಪ್ಪ ನಾಯ್ಕ್ ಬಲಸೆ ದೂರು ನೀಡಿ ತನಿಖೆ ನಡೆಸುವಂತೆ ಮುಂದಾಗಲಿ. ಸತ್ಯಾಸತ್ಯತೆ ಬಹಿರಂಗವಾಗಲಿ ಎಂದು ಅವರು ಸವಾಲು ಹಾಕಿದರು.
ಈ ವೇಳೆ ಮಾತನಾಡಿದ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾರವಾರದ ಶಾಸಕ ಸತೀಶ ಸೈಲ್ ಅವರ ಕಚೇರಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡುವ ವೇಳೆ ಉಪ ಮುಖ್ಯಮಂತ್ರಿ ಮಾತನಾಡಿರುವುದು ಸತ್ಯ. ಆದರೆ ಆ ಸಂದರ್ಭದಲ್ಲಿ ಸರ್ಕಾರದ ಸಚಿವರು ಸಾರ್ವಜನಿಕವಾಗಿ ವಿರೋಧ ವ್ಯಕ್ತಪಡಿಸುವುದು ಸಂಪ್ರದಾಯವಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿ ಬಳಿಕ ಹಿರಿಯ ನಾಯಕರು ಹಾಗೂ ಶಾಸಕರಾದ ಆರ್.ವಿ. ದೇಶಪಾಂಡೆ ಮತ್ತು ಭಿಮಣ್ಣ ನಾಯ್ಕ ಅವರೊಂದಿಗೆ ಸಚಿವರು ಈ ಯೋಜನೆಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. ಬಳಿಕ ಹೊನ್ನಾವರದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿಯೂ ಗುರುಗಳ ಸಮ್ಮುಖದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂದು ವಿವರಿಸಿದರು.
ಇದೇ ವೇಳೆ ಕಾರವಾರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಿರುವುದಾಗಿ ಹೇಳಿದ ಅವರು, ಭಟ್ಕಳ ಕ್ಷೇತ್ರದಲ್ಲಿಯೂ ಇದೇ ರೀತಿಯ ಆಸ್ಪತ್ರೆ ಸ್ಥಾಪನೆ ಕುರಿತು ಶೀಘ್ರದಲ್ಲೇ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಭಟ್ಕಳ ಮಹಿಳಾ ಬ್ಲಾಕ್ ಅಧ್ಯಕ್ಷೆ ನಯನಾ ನಾಯ್ಕ ಮಾತನಾಡಿ, ಕೆಲವರು ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ಬಳಸಿ ಮಹಿಳೆಯರ ಬಗ್ಗೆ ತಪ್ಪು ಪ್ರಚಾರ ನಡೆಸುತ್ತಿರುವುದು ವಿಷಾದಕರ ಎಂದು ಹೇಳಿದರು. ಮಹಿಳೆಯರು ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗದಂತೆ ಮಾಡಲು ಇಂತಹ ಕೃತ್ಯಗಳಿಗೆ ಮುಂದಾಗುವುದು ಖಂಡನೀಯ ಎಂದರು.
ಮಂಕಿ ಬ್ಲಾಕ್ ಅಧ್ಯಕ್ಷೆ ಉಷಾ ನಾಯ್ಕ ಕೂಡ ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಮಹಿಳೆಯರ ವಿರುದ್ಧ ನಕಲಿ ಖಾತೆಗಳಿಂದ ತೇಜೋವಧೆ ಮಾಡುವ ಬದಲು ನೇರವಾಗಿ ರಾಜಕೀಯ ನಡೆಸಬೇಕು. ಮುಂದೆಯೂ ಇಂತಹ ಸುಳ್ಳು ಪ್ರಚಾರ ಮುಂದುವರೆದರೆ ಮಹಿಳೆಯರ ಪರವಾಗಿ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

