ಭಟ್ಕಳ- ಭಟ್ಕಳ ನಗರದಲ್ಲಿ ರಮ್ಜಾನ್ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆ ಪ್ರದೇಶಗಳಲ್ಲಿ ಹೆಚ್ಚಾಗುವ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ಇಲಾಖೆ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಜಾರಿಗೆ ತಂದಿದೆ. ನಗರದಲ್ಲಿ ವಾಹನ ಸಂಚಾರ ಸುಗಮವಾಗಿರಲು ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಡಿವೈಎಸ್‌ಪಿ ಗಿರೀಶ್ ಮತ್ತು ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದಿವಾಕರ್ ಪಿ.ಎಂ. ನೀಡಿದ ಮಾಹಿತಿಯಂತೆ, ಹಳೆ ಬಸ್ ನಿಲ್ದಾಣದಿಂದ ನಾಗಬನ, ಕಳಿ ಹನುಮಂತ ದೇವಸ್ಥಾನ ರಸ್ತೆ ಮತ್ತು ವಿ.ವಿ. ರಸ್ತೆಯ ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಸುಲ್ತಾನ್ ಸ್ಟ್ರೀಟ್‌ನ ಮುಸ್ಟಾ ಕ್ರಾಸ್‌ನಿಂದ ರಂಜಾನ್ ಮಾರ್ಕೆಟ್ ಕಡೆಗೆ ಹೋಗುವ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇದೇ ವೇಳೆ ಮಾರಿಕಟ್ಟಾ ಪ್ರದೇಶದಿಂದ ಹೂವಿನ ಚೌಕದವರೆಗಿನ ರಸ್ತೆಯನ್ನು ಏಕಮುಖ ಸಂಚಾರ ಮಾರ್ಗವಾಗಿ ಘೋಷಿಸಲಾಗಿದೆ. ಮಾರಿಕಟ್ಟಾದಿಂದ ನಾಗಬನದ ಕಡೆಗೆ ಹೋಗುವ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಹಳೆ ಬಸ್ ನಿಲ್ದಾಣದಿಂದ ನಾಗಬನ ರಸ್ತೆಯವರೆಗೆ ರಸ್ತೆ ಎರಡೂ ಬದಿಗಳಲ್ಲಿಯೂ ವಾಹನ ನಿಲುಗಡೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಸಾರ್ವಜನಿಕರ ವಾಹನ ನಿಲುಗಡೆಗೆ ವಿಶೇಷ ವ್ಯವಸ್ಥೆಯನ್ನೂ ಮಾಡಲಾಗಿದೆ. ಪುರಸಭೆ ಹಿಂಭಾಗದಲ್ಲಿರುವ ಅಂಜುಮನ್ ಪ್ರೌಢಶಾಲಾ ಮೈದಾನ ಹಾಗೂ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಗಣೇಶೋತ್ಸವ ಮೈದಾನದಲ್ಲಿ ಸಂಜೆ 4 ಗಂಟೆಯಿಂದ ರಾತ್ರಿ 3 ಗಂಟೆಯವರೆಗೆ ವಾಹನಗಳನ್ನು ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ನಾಗಬನದಿಂದ ಮಾರಿಕಟ್ಟಾವರೆಗಿನ ನಿವಾಸಿಗಳಿಗೆ ವಿಶೇಷ ವಾಹನ ಪಾಸ್ ನೀಡಲಾಗುತ್ತಿದೆ. ಈ ಪಾಸ್ ಹೊಂದಿರುವವರು ಸಂಜೆ 8 ಗಂಟೆಯವರೆಗೆ ಮಾತ್ರ ದ್ವಿಚಕ್ರ ವಾಹನಗಳನ್ನು ಬಳಸಲು ಅವಕಾಶವಿದ್ದು, ಈ ಮಾರ್ಗದಲ್ಲಿ ನಾಲ್ಕು ಚಕ್ರ ವಾಹನಗಳು ಹಾಗೂ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಅಂಗಡಿಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ವಾಹನಗಳು ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯೊಳಗೆ ಮಾತ್ರ ಕಾರ್ಯ ಮುಗಿಸಬೇಕು ಎಂದು ಸೂಚಿಸಲಾಗಿದೆ. ಜೊತೆಗೆ ಪ್ರತಿ ಅಂಗಡಿಗೆ ಕೇವಲ ಒಂದು ದ್ವಿಚಕ್ರ ವಾಹನಕ್ಕೆ ಮಾತ್ರ ಪಾಸ್ ನೀಡಲಾಗುತ್ತದೆ.ಸಾರ್ವಜನಿಕರು ಈ ತಾತ್ಕಾಲಿಕ ಸಂಚಾರ ನಿಯಮಗಳನ್ನು ಪಾಲಿಸಿ ಪೊಲೀಸ್ ಇಲಾಖೆಗೆ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
