ಭಟ್ಕಳ:ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಬಂದರ್ ರಸ್ತೆಯ ನಿವಾಸಿ ಸರ್ವೋಷ್ ಹುಸೇನ್ (37) ಮತ್ತು ಬೆಂಗಳೂರಿನ ಶಣ್ಮುಖ ಕೆ.ಎಸ್. ಎಂಬವರನ್ನು ಆರೋಪಿಗಳಾಗಿ ಗುರುತಿಸಲಾಗಿದೆ. ಇವರು ಜಾನುವಾರು ಸಾಗಾಟಕ್ಕೆ ಸಂಬಂಧಿಸಿದ ಅಗತ್ಯ ಅನುಮತಿ ಪಡೆಯದೆ ವಾಹನದ ಮೂಲಕ ಎರಡು ಕೋಣಗಳನ್ನು ಸಾಗಾಟ ಮಾಡಿರುವುದು ಆರೋಪವಾಗಿದೆ. ಈ ಜಾನುವಾರುಗಳ ಒಟ್ಟು ಮೌಲ್ಯವು ಸುಮಾರು ಆರು ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.ಮೂಲಗಳ ಪ್ರಕಾರ, ಕೇರಳ ರಾಜ್ಯದ ಮಲ್ಲ ಪುರಂ ಪ್ರದೇಶದಿಂದ ಭಟ್ಕಳಕ್ಕೆ ಈ ಜಾನುವಾರುಗಳನ್ನು ತರಲಾಗಿದ್ದು, ಬಳಿಕ ಅವುಗಳನ್ನು ಕಟ್ಟಿಹಾಕಲಾಗಿತ್ತು ಎಂದು ತಿಳಿದುಬಂದಿದೆ.

ಈ ಕುರಿತು ಲಭಿಸಿದ ಖಚಿತ ಮಾಹಿತಿಯ ಆಧಾರದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವೆಂಕಟೇಶ ಮುರನಾಳ ಅವರ ನೇತೃತ್ವದಲ್ಲಿ ಪೊಲೀಸ್ ತಂಡ ದಾಳಿ ನಡೆಸಿತು. ಕಾರ್ಯಾಚರಣೆಯ ವೇಳೆ ಆರೋಪಿಗಳನ್ನು ಪತ್ತೆಹಚ್ಚಿ ಜಾನುವಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನ ಕೊರಾಣಿ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
