ಅಂಕೋಲಾ -ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಅವರ ಮೇಲೆ ಅಪರಿಚಿತರಿಂದ ದಾಳಿ ನಡೆದ ಘಟನೆ ಬುಧವಾರ ಬೆಳಿಗ್ಗೆ ವರದಿಯಾಗಿದೆ. ಈ ಘಟನೆ ಕಣಕಣೇಶ್ವರ ದೇವಸ್ಥಾನದ ಸಮೀಪ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.

ಮಾಹಿತಿಯ ಪ್ರಕಾರ, ಗೋಪಾಲಕೃಷ್ಣ ನಾಯಕ ಅವರು ತಮ್ಮ ವಾಹನದಿಂದ ಇಳಿದು ಸಮೀಪದ ಸೆಲೂನ್ ಕಡೆ ನಡೆದುಕೊಂಡು ಹೋಗುತ್ತಿದ್ದಾಗ, ಅವರನ್ನು ಹಿಂಬಾಲಿಸಿಕೊಂಡು ಬಂದ ಕೆಲವರು ಏಕಾಏಕಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಚಾಕುವಿನಿಂದ ತಲೆ, ಕೈ ಮತ್ತು ಭುಜ ಭಾಗಗಳಿಗೆ ಗಾಯಗೊಳಿಸಲಾಗಿದೆ ಎಂದು ತಿಳಿದುಬಂದಿದೆ.ಹಲ್ಲೆಯಿಂದ ತಪ್ಪಿಸಿಕೊಳ್ಳಲು ಅವರು ತಕ್ಷಣ ಸಮೀಪದಲ್ಲಿದ್ದ ಬ್ಯಾಂಕ್ ಒಳಗೆ ಆಶ್ರಯ ಪಡೆದು ಬಾಗಿಲು ಮುಚ್ಚಿಕೊಂಡಿದ್ದಾರೆ. ಇದರಿಂದ ಗಂಭೀರ ಅನಾಹುತ ತಪ್ಪಿದಂತೆ ಹೇಳಲಾಗುತ್ತಿದೆ.
ದಾಳಿಗೆ ಸಂಬಂಧಿಸಿದಂತೆ, ಆರೋಪಿಗಳು ಗೋವಾ ನೋಂದಣಿ ಹೊಂದಿದ ಕಾರಿನಲ್ಲಿ ಬಂದಿದ್ದರು ಎಂದು ಶಂಕಿಸಲಾಗಿದೆ. ಈ ಗುಂಪಿನವರು ಕಳೆದ ಕೆಲವು ದಿನಗಳಿಂದ ಅಂಕೋಲಾದಲ್ಲಿನ ಒಂದು ಹೊಟೇಲ್‌ನಲ್ಲಿ ತಂಗಿದ್ದರು ಎಂಬ ಮಾಹಿತಿಯೂ ತನಿಖೆಯಲ್ಲಿ ಹೊರಬಂದಿದೆ ಎಂದು ಮೂಲಗಳು ಸೂಚಿಸುತ್ತವೆ.

ಗಾಯಗೊಂಡಿರುವ ನಾಯಕ ಅವರನ್ನು ಅಂಕೋಲಾದ ಅವಿನಾಶ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಸಂಬಂಧ ಅಂಕೋಲಾ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
