ಭಟ್ಕಳ- ಭಟ್ಕಳ ನಗರದ ಪ್ರಮುಖ ರಸ್ತೆಯಲ್ಲಿರುವ ಅರ್ಬನ್ ಬ್ಯಾಂಕ್ ಸಮೀಪದ ಸಯ್ಯದ್ ಕಾಜ್ಮಿ ಟವರ್‌ನಲ್ಲಿ ಆಯೋಜಿಸಲಾದ “ನಿತ್ಯ ಹಲಸು ಮೇಳ”ಕ್ಕೆ ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟ ಅವರು ಚಾಲನೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ಹಲಸಿನ ಗಿಡಕ್ಕೆ ನೀರು ಹಾಕುವ ಮೂಲಕ ಮೇಳವನ್ನ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ಹಲಸು ಮತ್ತು ಮಾವಿನ ಹಣ್ಣುಗಳು ಋತುಮಾನಕ್ಕೆ ಮಾತ್ರ ಲಭ್ಯವಾಗುವವುಗಳಾಗಿದ್ದು, ಇತ್ತೀಚಿನ ದಿನಗಳಲ್ಲಿ ಅವುಗಳ ಲಭ್ಯತೆ ಕಡಿಮೆಯಾಗಿದೆ ಎಂದು ಹೇಳಿದರು. ಆದರೆ ಮಾರ್ಚ್ ತಿಂಗಳಲ್ಲಿಯೇ ವಿವಿಧ ರುಚಿಯ ಹಲಸಿನ ಹಣ್ಣುಗಳನ್ನು ಒದಗಿಸುವ ಮೂಲಕ ಸ್ಥಳೀಯ ಜನತೆಗೆ ಹೊಸ ಅನುಭವವನ್ನು ನೀಡುತ್ತಿರುವ ಬೆಳಕೆಯ ಪಾಂಡುರಂಗ ನಾಯ್ಕ ಅವರ ಪ್ರಯತ್ನವನ್ನು ಅವರು ಶ್ಲಾಘಿಸಿದರು.
ಹಲಸು ಸೀಸನ್ ಮುಗಿಯುವವರೆಗೆ ಮೇಳವನ್ನು ಮುಂದುವರಿಸುವ ಉದ್ದೇಶವಿದೆ ಎಂದು ಆಯೋಜಕರು ತಿಳಿಸಿದ್ದು, ಮುಂದಿನ ದಿನಗಳಲ್ಲಿ ಮಾವು ಸೇರಿದಂತೆ ವಿವಿಧ ಹಣ್ಣುಗಳು ಹಾಗೂ ಹಣ್ಣುಗಳಿಂದ ತಯಾರಿಸಲಾದ ಹಲ್ವಾ ಮತ್ತು ಇತರ ಆಹಾರ ಪದಾರ್ಥಗಳನ್ನು ಕೂಡಾ ಇಲ್ಲಿ ಲಭ್ಯವಾಗುವಂತೆ ಮಾಡುವ ಯೋಜನೆ ಹೊಂದಿರುವುದಾಗಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸಮಾಜಸೇವಕ ನಜೀರ್ ಕಾಶಿಮಜಿ ಮಾತನಾಡಿ, ಹಲಸು ಮತ್ತು ಮಾವು ಜನಪ್ರಿಯ ಹಣ್ಣುಗಳಾಗಿದ್ದು, ಸಾಮಾನ್ಯವಾಗಿ ಮಳೆಗಾಲದಲ್ಲಿ ಮಾತ್ರ ಹೆಚ್ಚು ದೊರೆಯುವ ಹಲಸನ್ನು ಈಗಲೇ ಲಭ್ಯವಾಗುವಂತೆ ಮಾಡಿರುವುದು ವಿಶೇಷ ಎಂದರು. ಸ್ಥಳೀಯರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಈ ಮೇಳದ ರೂವಾರಿ ಪಾಂಡುರಂಗ ನಾಯ್ಕ ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಅಬ್ದುಲ್ ವಾಸಿಫ್, ಲಕ್ಕಿ ಫ್ಯಾಮಿಲಿಯ ಸದಸ್ಯರು, ರಿಜ್ವಾನ್, ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ ನಾಯಕ, ಹಿರಿಯ ವೈದ್ಯೆ ಡಾ. ಸವಿತಾ ಕಾಮತ್, ಸನಾ ಆಪ್ಟಿಶಿಯನ್ಸ್‌ನ ಅಬ್ದುಲ್ ಜಬ್ಬಾರ್ ಸೇರಿದಂತೆ ಹಲವರು ಭಾಗವಹಿಸಿ ಶುಭ ಹಾರೈಸಿದರು.
