ಭಟ್ಕಳ: ರಾಜ್ಯ ಸರ್ಕಾರವು 2025ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾದ ಪೊಲೀಸ್ ಅಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪಿಎಸ್‌ಐ ನವೀನ್ ಎಸ್. ನಾಯ್ಕ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿರುವ ಅಧಿಕಾರಿಗಳಿಗೆ ನೀಡಲಾಗುವ ಈ ಪ್ರತಿಷ್ಠಿತ ಪದಕಕ್ಕಾಗಿ ನಿಗದಿತ ಮಾನದಂಡಗಳನ್ನು ನವೀನ್ ನಾಯ್ಕ ಅವರು ಯಶಸ್ವಿಯಾಗಿ ಪೂರೈಸಿದ್ದಾರೆ. ಅವರ ನಿಷ್ಠೆ, ಕಾರ್ಯಕ್ಷಮತೆ ಹಾಗೂ ಕರ್ತವ್ಯನಿಷ್ಠೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಈ ಗೌರವವನ್ನು ಘೋಷಿಸಿದೆ.
ನವೀನ್ ಎಸ್. ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಾಮಾಣಿಕ ಮತ್ತು ಸಮರ್ಥ ಪೊಲೀಸ್ ಅಧಿಕಾರಿಯಾಗಿ ಹೆಸರಾಗಿದ್ದಾರೆ. ಪ್ರಸ್ತುತ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲ್ಪಡುವ ಭಟ್ಕಳ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವರು, ಈ ಹಿಂದೆ ಕುಮಟಾ ಹಾಗೂ ಗೋಕರ್ಣ ಸೇರಿದಂತೆ ವಿವಿಧ ಕಡೆಗಳಲ್ಲಿ ಸಹ ಉತ್ತಮ ಸೇವೆ ಸಲ್ಲಿಸಿದ್ದಾರೆ.ಕಾನೂನು ಸುವ್ಯವಸ್ಥೆಯನ್ನು ಸಮರ್ಪಕವಾಗಿ ಕಾಪಾಡುವಲ್ಲಿ ತೋರಿದ ಸಮರ್ಪಣೆ ಮತ್ತು ದೀರ್ಘಕಾಲದ ಸೇವೆಯನ್ನು ಮಾನ್ಯತೆ ನೀಡುವ ಉದ್ದೇಶದಿಂದ ಈ ಪ್ರಶಸ್ತಿ ನೀಡಲಾಗಿದೆ.
