ಅಂಕೋಲಾ-ಗೋಪಾಲಕೃಷ್ಣ ನಾಯಕ ಅವರ ಮೇಲೆ ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ತಮ್ಮ ಕುಟುಂಬದ ಹೆಸರನ್ನು ಅನಗತ್ಯವಾಗಿ ಪ್ರಸ್ತಾಪಿಸಲಾಗುತ್ತಿದೆ ಎಂದು ಉದ್ಯಮಿ ಮಯೂರ ಆರ್. ನಾಯಕ ಅವರ ಕುಟುಂಬ ಸ್ಪಷ್ಟಪಡಿಸಿದೆ. ಈ ರೀತಿಯ ಆರೋಪಗಳು ದುರುದ್ದೇಶಪೂರಿತವಾಗಿದ್ದು, ವೈಯಕ್ತಿಕ ಗೌರವಕ್ಕೆ ಧಕ್ಕೆ ತರಲು ನಡೆಸುತ್ತಿರುವ ಪ್ರಯತ್ನ ಎಂದು ಅವರು ಹೇಳಿದ್ದಾರೆ.
ಕುಟುಂಬದ ಪ್ರಕಟಣೆಯ ಪ್ರಕಾರ, ಈ ಪ್ರಕರಣವನ್ನು ಕೆಲವು ಮಂದಿ ತಮ್ಮ ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಅಥವಾ ಸ್ವಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿರುವ ಸಾಧ್ಯತೆ ಇದೆ. ಪ್ರಕರಣಕ್ಕೆ ಸಂಬಂಧವಿಲ್ಲದಿದ್ದರೂ ಮಯೂರ ನಾಯಕ ಹಾಗೂ ದಿ. ಆರ್. ಎನ್. ನಾಯಕ ಅವರ ಹೆಸರನ್ನು ಉಲ್ಲೇಖಿಸುವುದು ಉದ್ದೇಶಪೂರ್ವಕವಾಗಿದೆ ಎಂದು ಆರೋಪಿಸಲಾಗಿದೆ.ಇದಲ್ಲದೆ, ಪ್ರಕರಣದ ದಿಕ್ಕನ್ನು ಬದಲಿಸಲು ಅಥವಾ ತಪ್ಪು ಕಲ್ಪನೆ ಮೂಡಿಸಲು ಕೆಲವರು ಪ್ರಯತ್ನಿಸುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಕುಟುಂಬವು ಅಭಿಪ್ರಾಯಪಟ್ಟಿದೆ. ಸಹಕಾರಿ ಚುನಾವಣೆಯ ಸಂದರ್ಭದಲ್ಲಿ ಗೋಪಾಲಕೃಷ್ಣ ನಾಯಕ ಹಲವರೊಂದಿಗೆ ವಾಗ್ವಾದ ನಡೆಸಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದರೂ, ಏಕೆ ಕೇವಲ ಮಯೂರ ನಾಯಕ ಅವರ ಹೆಸರನ್ನು ಮಾತ್ರ ಪ್ರಮುಖವಾಗಿ ಉಲ್ಲೇಖಿಸಲಾಗುತ್ತಿದೆ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ, ಕೆಲವು ಮಾಧ್ಯಮ ವರದಿಗಳ ಮೂಲಕ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಯತ್ನವೂ ನಡೆಯುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸಲಾಗಿದೆ. ಆದ್ದರಿಂದ, ವದಂತಿಗಳು ಹಾಗೂ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಕುಟುಂಬದವರು ಮನವಿ ಮಾಡಿದ್ದಾರೆ.
ಹಲ್ಲೆ ಪ್ರಕರಣದ ತನಿಖೆ ನ್ಯಾಯಸಮ್ಮತವಾಗಿ ನಡೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಕುಟುಂಬ, ಸತ್ಯಾಂಶಗಳು ಹೊರಬರುವುದಕ್ಕೆ ಕಾಯುತ್ತಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
