ಭಟ್ಕಳ:ಮೊಬೈಲ್ ಮಾರಾಟದ ವೇಳೆ ಹಳೆಯ ಡೇಟಾವನ್ನು ಅಳಿಸದೇ ನೀಡಿದ ಪರಿಣಾಮ ಖಾಸಗಿ ಮಾಹಿತಿಯ ದುರುಪಯೋಗವಾಗಿರುವ ಘಟನೆ ಭಟ್ಕಳದಲ್ಲಿ ಬೆಳಕಿಗೆ ಬಂದಿದೆ.ನಗರದ ಕೋಕ್ತಿನಗರ ನಿವಾಸಿ 23 ವರ್ಷದ ಯುವಕನೊಬ್ಬ 2025ರ ಮೇ 7ರಂದು ಸ್ಥಳೀಯ ಮೊಬೈಲ್ ಅಂಗಡಿಯಿಂದ ಸುಮಾರು ₹75,000 ಮೌಲ್ಯದ ಐಫೋನ್‌ನ್ನು ಮುಂಗಡ ಹಣ ಪಾವತಿಸಿ, ಉಳಿದ ಮೊತ್ತವನ್ನು ಕಂತಿನ ಆಧಾರದಲ್ಲಿ ಖರೀದಿಸಿದ್ದಾನೆ.ನಂತರ ಆ ಫೋನ್‌ನ್ನು ಬಳಸುತ್ತಿದ್ದ ವೇಳೆ ವೈಯಕ್ತಿಕ ಫೋಟೋ ಹಾಗೂ ವಿಡಿಯೋಗಳನ್ನು ಅದರಲ್ಲಿ ಸಂಗ್ರಹಿಸಿಕೊಂಡಿದ್ದಾನೆ. ಕೆಲವು ತಿಂಗಳುಗಳ ಬಳಿಕ ಪರಿಚಿತನೊಬ್ಬ ಆ ಫೋನ್ ಖರೀದಿಸಲು ಮುಂದಾಗಿ, ಹಣವನ್ನು ನಂತರ ನೀಡುವುದಾಗಿ ಹೇಳಿ ಫೋನ್‌ನ್ನು ಪಡೆದುಕೊಂಡಿದ್ದಾನೆ.
ಆದರೆ, ಖರೀದಿದಾರನು ಹಣ ಪಾವತಿಸದೆ ಕಾಲಹರಣ ಮಾಡುತ್ತಿದ್ದಾನೆ. ಈ ನಡುವೆ ಆತ ವಿದೇಶಕ್ಕೆ ತೆರಳಿರುವುದು ತಿಳಿದುಬಂದಿದ್ದು, ಹಣಕ್ಕಾಗಿ ಒತ್ತಾಯಿಸಿದಾಗ ಫೋನ್‌ನಲ್ಲಿ ಉಳಿದಿದ್ದ ಖಾಸಗಿ ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.ಘಟನೆಯಿಂದ ಆತಂಕಗೊಂಡ ಮೂಲ ಮಾಲೀಕ ಭಟ್ಕಳ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
