ಭಟ್ಕಳ: ರಾಜ್ಯ ಸರ್ಕಾರದ ಮಹತ್ವದ ಆಡಳಿತಾತ್ಮಕ ನಿರ್ಧಾರದಿಂದ ಭಟ್ಕಳ ಪಟ್ಟಣಕ್ಕೆ ಹೊಸ ಗುರುತು ದೊರಕಿದ್ದು, ಪುರಸಭೆಯಿಂದ ಮೇಲ್ದರ್ಜೆಗೇರಿಸಿ ನಗರಸಭೆಯಾಗಿ ಅಧಿಕೃತ ಘೋಷಣೆ ಮಾಡಲಾಗಿದೆ. ಈ ಸಂಬಂಧ ಅಂತಿಮ ಅಧಿಸೂಚನೆ ಹೊರಬಿದ್ದಿದ್ದು, ಹೊಸ ನಗರಸಭೆಗೆ ನೂತನ ಪೌರಾಯುಕ್ತರಾಗಿ ಬಾಬಾ ಸಾಹೇಬ್ ಮಾನೆ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ಭಟ್ಕಳದ ಆಡಳಿತ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ ಪುರಸಭೆಯ ಜೊತೆಗೆ ಜಾಲಿ ಪಟ್ಟಣ ಪಂಚಾಯಿತಿ ಮತ್ತು ಹೆಬಳೆ ಗ್ರಾಮ ಪಂಚಾಯಿತಿ ಪ್ರದೇಶಗಳನ್ನು ಸೇರಿಸಿ ಒಟ್ಟು ಸುಮಾರು 22.67 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ನಗರಸಭೆ ರಚಿಸಲಾಗಿದೆ.
ಇದಕ್ಕೂ ಮುನ್ನ ಕುಡಚಿ ಪುರಸಭೆಯಲ್ಲಿ ಸೇವೆ ಸಲ್ಲಿಸಿದ್ದ ಬಾಬಾ ಸಾಹೇಬ್ ಮಾನೆ ಅವರನ್ನು ಸರ್ಕಾರ ಭಟ್ಕಳಕ್ಕೆ ವರ್ಗಾವಣೆ ಮಾಡಿ ಈ ಹುದ್ದೆಗೆ ನಿಯೋಜಿಸಿದೆ. ಅವರು ನಗರಸಭೆ ಕಚೇರಿಗೆ ಆಗಮಿಸಿದ ವೇಳೆ, ಮಾಜಿ ಮುಖ್ಯಾಧಿಕಾರಿ ವೆಂಕಟೇಶ ನಾವುಡ ಅವರಿಂದ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನೆರವೇರಿತು.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಮಾನೆ ಅವರು, ನಗರಾಭಿವೃದ್ಧಿಗೆ ಸಂಬಂಧಿಸಿದ ಮೂಲಭೂತ ಸೇವೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ವಿಶೇಷವಾಗಿ ಸ್ವಚ್ಛತೆ ನಿರ್ವಹಣೆ, ಬೀದಿ ದೀಪಗಳ ಸುಧಾರಣೆ ಹಾಗೂ ಕುಡಿಯುವ ನೀರಿನ ಸಮರ್ಪಕ ಪೂರೈಕೆ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.ನಗರದ ಸ್ವಚ್ಛತೆಗಾಗಿ ಸಾರ್ವಜನಿಕರ ಸಹಭಾಗಿತ್ವ ಅತ್ಯವಶ್ಯಕವಾಗಿದ್ದು, ಹಸಿ, ಒಣ ಹಾಗೂ ಅಪಾಯಕಾರಿ ಕಸಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡುವಂತೆ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ಇದೇ ವೇಳೆ, ಸಾರ್ವಜನಿಕರು ತಮ್ಮ ಪ್ರದೇಶದಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ನೇರವಾಗಿ ಮಾಹಿತಿ ನೀಡಬಹುದಾಗಿದೆ. ಅವುಗಳನ್ನು ಶೀಘ್ರ ಪರಿಹರಿಸುವ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ನಗರಸಭೆಯ ಸೇವೆಗಳು ಜನರಿಗೆ ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪುವಂತೆ ಕಾರ್ಯನಿರ್ವಹಿಸಲಾಗುವುದು ಎಂದೂ ತಿಳಿಸಿದ್ದಾರೆ.ಈಸಂದರ್ಭದಲ್ಲಿ ಪ್ರಭಾರ ಪುರಸಬೆ. ಮುಖ್ಯಾಧಿಕಾರಿ ವೆಂಕಟೇಶ್ ನಾವುಡ ಉಪಸ್ಥಿತರಿದ್ದರು.
