
ಭಟ್ಕಳ-ಸಕಲ ಜೀವರಾಶಿಗಳ ಕಷ್ಟಗಳನ್ನು ಪರಿಹರಿಸುವ ಶಕ್ತಿ ಮತ್ತು ಭಕ್ತಿಯ ಸಂಕೇತವಾದ ಶ್ರೀ ಹನುಮಂತನ ಜಯಂತಿಯ ಅಂಗವಾಗಿ ಭಟ್ಕಳ ತಾಲೂಕಿನ ಶಿರಾಲಿ ಸಮೀಪದ ಸಾರದಹೊಳೆ ಹಳೆಕೋಟೆ ಹನುಮಂತ ದೇವಸ್ಥಾನದಲ್ಲಿ ನಾಲ್ಕನೇ ವರ್ಷದ ವರ್ಧಂತಿ ಉತ್ಸವ ಭಕ್ತಿಭಾವದಿಂದ ನಡೆಯಿತು.ಈ ಕಾರ್ಯಕ್ರಮದಲ್ಲಿ ರಾಜ್ಯ ಸಚಿವ ಮಂಕಾಳ ವೈದ್ಯ ಅವರು ಭಾಗವಹಿಸಿ, ದೇವಸ್ಥಾನ ಕಮಿಟಿಯಿಂದ ಸನ್ಮಾನ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಶತಮಾನಗಳ ಇತಿಹಾಸ ಹೊಂದಿರುವ ಈ ದೇವಸ್ಥಾನವು ಸ್ಥಳೀಯರ ಆರಾಧ್ಯ ಕೇಂದ್ರವಾಗಿದ್ದು, ತಾವು ಪುನರ್ ಪ್ರತಿಷ್ಠಾ ಮಹೋತ್ಸವದ ಸಮಯದಲ್ಲಿ ಭಕ್ತನಾಗಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದರು.
ಹಳೆಕೋಟೆ ಹನುಮಂತನ ಕೃಪೆಯಿಂದಲೇ ತಾವು ಇಂದು ಶಾಸಕನಾಗಿಯೂ ಹಾಗೂ ಸಚಿವನಾಗಿಯೂ ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿದರು. ದೇವಸ್ಥಾನದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ₹1 ಕೋಟಿ ಅನುದಾನವನ್ನು ಮಂಜೂರು ಮಾಡಿಸಿರುವುದನ್ನೂ ಅವರು ಉಲ್ಲೇಖಿಸಿದರು. ಈ ಸನ್ಮಾನವು ತಮಗೆ ಇನ್ನಷ್ಟು ಜವಾಬ್ದಾರಿಯನ್ನು ತಂದಿದೆ ಎಂದು ತಿಳಿಸಿ, ಮುಂದೆಯೂ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ವೇಳೆ ದೇವಸ್ಥಾನ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಕಾಮಗಾರಿಗಳಿಗಾಗಿ ಹಣಕಾಸಿನ ನೆರವಿನ ಮನವಿ ಪತ್ರವನ್ನು ಕಮಿಟಿ ವತಿಯಿಂದ ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ, ಪೂಜ್ಯ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಆಶೀರ್ವಾದದೊಂದಿಗೆ “ಕರಾವಳಿ ಸಮಾಚಾರ” ವಾರಪತ್ರಿಕೆಯನ್ನು ಸಚಿವರು ಲೋಕಾರ್ಪಣೆ ಮಾಡಿದರು. ಅರ್ಜುನ ಮಲ್ಯ ಅವರ ಸಾರಥ್ಯದಲ್ಲಿ ಹೊರಬರುತ್ತಿರುವ ಈ ಪತ್ರಿಕೆ ಸಮಾಜಮುಖಿ ಚಿಂತನೆಗಳನ್ನು ಉತ್ತೇಜಿಸುವುದರೊಂದಿಗೆ ಭ್ರಷ್ಟಾಚಾರ, ಸಾಮಾಜಿಕ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವ ಉದ್ದೇಶ ಹೊಂದಿದೆ.“ಸಮಾಜದ ಅಭಿವೃದ್ಧಿಗೆ ಜವಾಬ್ದಾರಿಯುತ ಪತ್ರಿಕೋದ್ಯಮ ಅತ್ಯಗತ್ಯ. ‘ಕರಾವಳಿ ಸಮಾಚಾರ’ ಪತ್ರಿಕೆ ಜನರ ಸಮಸ್ಯೆಗಳನ್ನು ಬೆಳಕಿಗೆ ತಂದು ಸತ್ಯವನ್ನು ನಿರ್ಭೀತಿಯಾಗಿ ಪ್ರಸ್ತುತಪಡಿಸಲಿ,” ಎಂದು ಸಚಿವರು ಹಾರೈಸಿದರು.

ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಆಶೀರ್ವಚನ ನೀಡಿ, ಸತ್ಯ ಮತ್ತು ಧರ್ಮದ ಮಾರ್ಗದಲ್ಲಿ ಸಾಗುವ ಕಾರ್ಯ ಸದಾ ಯಶಸ್ವಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಣ್ಯರು, ಭಕ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದು, ಉತ್ಸವ ಯಶಸ್ವಿಯಾಗಿ ನೆರವೇರಿತು.
