ಹಳಿಯಾಳ: ತಾಲೂಕಿನ ಉಪ ಕಾರಾಗೃಹದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೈಲರ್ ವಿರುದ್ಧ ಲಂಚ ಬೇಡಿಕೆಯ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.ಮೂಲಗಳ ಪ್ರಕಾರ, ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾದ ವ್ಯಕ್ತಿಯೊಬ್ಬನು ಜೈಲಿನಲ್ಲಿ ಕೆಲಸ ಮಾಡಿ ಗಳಿಸಿದ ಹಣವನ್ನು ಪಡೆಯಲು ಮುಂದಾದಾಗ, ಸಂಬಂಧಪಟ್ಟ ಜೈಲರ್ ₹60 ಸಾವಿರ ಲಂಚ ಕೇಳಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಅಸಮಾಧಾನಗೊಂಡ ವ್ಯಕ್ತಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾನೆ.

ದೂರು ಆಧರಿಸಿ ಗುರುವಾರ ಬೆಳಿಗ್ಗೆ ಅಧಿಕಾರಿಗಳು ಸಬ್ ಜೈಲ್‌ಗೆ ಭೇಟಿ ನೀಡಿ, ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಈ ವೇಳೆ ಜೈಲರ್ ಬಳಿಯಿದ್ದ ಮೊಬೈಲ್ ಫೋನ್ ವಶಕ್ಕೆ ಪಡೆದು ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.ತನಿಖೆಯಲ್ಲಿ, ಹಣವನ್ನು ನೇರವಾಗಿ ಸ್ವೀಕರಿಸಲು ಮುಂದಾಗದೆ, ಮಧ್ಯವರ್ತಿಗಳ ಮೂಲಕ ಪಡೆಯಲು ಯತ್ನಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಡಿಜಿಟಲ್ ವ್ಯವಹಾರಗಳ ಮಾಹಿತಿಯೂ ಪರಿಶೀಲನೆಯಲ್ಲಿದ್ದು, ಕೆಲವು ಹಣ ವರ್ಗಾವಣೆಯ ದಾಖಲೆಗಳು ಅಧಿಕಾರಿಗಳ ಗಮನಕ್ಕೆ ಬಂದಿವೆ.
ಲೋಕಾಯುಕ್ತ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ದಾಖಲೆಗಳನ್ನು ಸಂಗ್ರಹಿಸುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲನೆ ಮುಂದುವರಿದಿದೆ. ಪ್ರಕರಣದಲ್ಲಿ ಇನ್ನಷ್ಟು ವ್ಯಕ್ತಿಗಳ ಪಾತ್ರ ಇರುವ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
