ಭಟ್ಕಳ: ತಾಲೂಕಿನ ತಲಗೇರಿ ಸಮೀಪದ ಜಾಲಿ–ವಿವೇಕಾನಂದ ನಗರ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಗೋವು ಕಳ್ಳತನಕ್ಕೆ ಯತ್ನಿಸಿದ ಘಟನೆ ನಾಟಕೀಯ ತಿರುವು ಪಡೆದುಕೊಂಡಿದೆ. ಗ್ರಾಮಸ್ಥರ ಎಚ್ಚರಿಕೆಯಿಂದ ಕಳ್ಳತನ ವಿಫಲವಾದರೂ, ಆರೋಪಿಗಳು ಸರಣಿ ಎಸ್ಕೇಪ್ ಮೂಲಕ ಪೊಲೀಸರ ಕೈತಪ್ಪಿದ್ದಾರೆ.

ಮಧ್ಯರಾತ್ರಿ ಸುಮಾರು 3.45ರ ವೇಳೆಗೆ ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಕಳ್ಳರು ಗೋವನ್ನು ಕದ್ದೊಯ್ಯಲು ಯತ್ನಿಸುತ್ತಿದ್ದ ವೇಳೆ, ಗೋವುಗಳ ಕೂಗು ಕೇಳಿ ಅನುಮಾನಗೊಂಡ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಧಾವಿಸಿ ವಾಹನವನ್ನು ಸುತ್ತುವರೆದರು. ಸಿಕ್ಕಿಬೀಳುವ ಭೀತಿಯಿಂದ ಆರೋಪಿಗಳು ಕಾರು ಹಾಗೂ ಮೊಬೈಲ್ ಫೋನ್‌ಗಳನ್ನು ಅಲ್ಲೇ ಬಿಟ್ಟು ಕತ್ತಲಲ್ಲಿ ಪರಾರಿಯಾಗಿದ್ದಾರೆ.
ಪರಾರಿಯಾದ ಕಳ್ಳರು ಸಮೀಪದ ಅರಣ್ಯ ಪ್ರದೇಶದಲ್ಲಿ ಅಡಗಿ, ಮತ್ತೊಂದು ಮೊಬೈಲ್ ಮೂಲಕ ಇನ್ನೊಂದು ತಂಡವನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದರು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಗ್ರಾಮಸ್ಥರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ ವೇಳೆ, ಆರೋಪಿಗಳು ತಂದಿದ್ದ ಬೈಕ್‌ನ್ನೂ ಬಿಟ್ಟು ಮತ್ತೆ ಪರಾರಿಯಾಗಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿರುವುದು ವರದಿಯಾಗಿದೆ.ಪೊಲೀಸರು ಸ್ಥಳದಿಂದ ಸ್ವಿಫ್ಟ್ ಕಾರು, ಸುಜುಕಿ ಆಕ್ಸೆಸ್ ಸ್ಕೂಟರ್, ಮೊಬೈಲ್ ಫೋನ್‌ಗಳು ಹಾಗೂ ಕದ್ದೊಯ್ಯಲು ಯತ್ನಿಸಿದ್ದ ಗೋವು ಮತ್ತು ಕರುವನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳರು ನಕಲಿ ನಂಬರ್ ಪ್ಲೇಟ್ ಬಳಸಿ ಗುರುತು ಮರೆಮಾಚಲು ಯತ್ನಿಸಿರುವುದು ಬೆಳಕಿಗೆ ಬಂದಿದೆ.ಇತ್ತೀಚೆಗೆ ಈ ಭಾಗದಲ್ಲಿ ಗೋವು ಕಳ್ಳತನ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
