ಭಟ್ಕಳ: ಜಿಲ್ಲಾ ಆರೋಗ್ಯ ಇಲಾಖೆಯ ಮಾರ್ಗದರ್ಶನದಲ್ಲಿ ಟಿಎಚ್‌ಒ ಡಾ. ಸನಾ ನೇತೃತ್ವದ ತಂಡವು ಪಟ್ಟಣದ ವಿವಿಧ ಭಾಗಗಳಲ್ಲಿ ಸೋಮವಾರ ನಕಲಿ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ ೩ ಕ್ಲಿನಿಕ್‌ಗಳನ್ನು ಸೀಜ್ ಮಾಡಿದೆ.

ದಾಳಿಯಲ್ಲಿ ಟಿಎಚ್‌ಒ, ನೋಡಲ್ ಅಧಿಕಾರಿ, ಆಯುಷ್ ಅಧಿಕಾರಿ, ನಗರ ಠಾಣೆ ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಭಾಗವಹಿಸಿ ಪಟ್ಟಣದ ನಾಲ್ಕು ಕ್ಲಿನಿಕ್‌ಗಳು ಹಾಗೂ ಶಿರಾಲಿಯ ಒಂದು ಕ್ಲಿನಿಕ್‌ನಲ್ಲಿ ಪರಿಶೀಲನೆ ನಡೆಸಿದರು. ಈ ವೇಳೆ ವೈದ್ಯರು ಹೊಂದಿರುವ ಎಂ.ಬಿ.ಬಿ.ಎಸ್, ಬಿ.ಎ.ಎಂ.ಎಸ್, ಬಿ.ಎಚ್.ಎಂ.ಎಸ್ ಮತ್ತು ಯುನಾನಿ ಪದವಿಗಳ ಪ್ರಮಾಣಪತ್ರಗಳನ್ನು ಪರಿಶೀಲಿಸಲಾಯಿತು.ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ೩ ಕ್ಲಿನಿಕ್‌ಗಳನ್ನು ಸೀಜ್ ಮಾಡಲಾಗಿದ್ದು, ಮದಿನಾ ಕಾಲನಿಯ ಒಂದು ಕ್ಲಿನಿಕ್ ಮಾಲೀಕರು ಸ್ವಯಂವಾಗಿ ಕ್ಲಿನಿಕ್ ಬಂದ್ ಮಾಡಿದ್ದು, ಅವರ ಬಾಗಿಲಿಗೆ ನೋಟಿಸ್ ಅಂಟಿಸಲಾಗಿದೆ.
ಕ್ಲಿನಿಕ್‌ಗಳ ವಿರುದ್ಧದ ಮಾಹಿತಿಯನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ರವಾನಿಸಲಾಗಿದ್ದು, ಸಮಗ್ರ ತನಿಖೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಟಿಎಚ್‌ಒ ಡಾ. ಸನಾ ತಿಳಿಸಿದ್ದಾರೆ.

ಪಟ್ಟಣ ಹಾಗೂ ತಾಲೂಕಿನ ವಿವಿಧ ಭಾಗಗಳಲ್ಲಿ ಇಂತಹ ಪರಿಶೀಲನೆ ಕಾರ್ಯ ಮುಂದುವರಿಯಲಿದ್ದು, ಸಾರ್ವಜನಿಕರು ಅನಧಿಕೃತ ವೈದ್ಯರ ಬಳಿ ಚಿಕಿತ್ಸೆ ಪಡೆಯಬಾರದು. ಸರ್ಕಾರಿ ಹಾಗೂ ಮಾನ್ಯತೆ ಪಡೆದ ನೋಂದಾಯಿತ ವೈದ್ಯರಿಂದ ಮಾತ್ರ ಚಿಕಿತ್ಸೆ ಪಡೆಯಬೇಕೆಂದು ಅವರು ಮನವಿ ಮಾಡಿದ್ದಾರೆ.
