ಭಟ್ಕಳ: ಅರಣ್ಯ ಭೂಮಿ ಹಕ್ಕು ಸಂಬಂಧಿಸಿದ ಮಹಜರ್ (ಸ್ಥಳ ಪರಿಶೀಲನೆ) ಪ್ರಕ್ರಿಯೆಯಲ್ಲಿ ಗಂಭೀರ ವ್ಯತ್ಯಾಸಗಳು ಕಂಡುಬಂದಿದ್ದು, ಇದರ ವಿರುದ್ಧ ರಾಜ್ಯ ಉಸ್ತುವಾರಿ ಸಮಿತಿಗೆ ಆಕ್ಷೇಪ ಸಲ್ಲಿಸಲಾಗುವುದು ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಅವರು ಭಟ್ಕಳ ತಾಲೂಕಿನ ವಿವಿಧ ಅರಣ್ಯ ಅತಿಕ್ರಮಣದಾರರ ಸ್ಥಳಗಳಿಗೆ ಭೇಟಿ ನೀಡಿ ಮಹಜರ್ ಪ್ರಕ್ರಿಯೆ ಪರಿಶೀಲಿಸಿದ ನಂತರ ಮಾತನಾಡಿದರು. ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿದಾರರಿಗೆ ಅಗತ್ಯ ದಾಖಲೆಗಳ ಕೊರತೆಯಿಂದ, ಮಹಜರ್ ಪ್ರಕ್ರಿಯೆ ಮೂಲಕ ದಾಖಲಾತಿ ಸಂಗ್ರಹಣೆ ನಡೆಯುತ್ತಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಸಾಗುವಳಿ ಕುರುಹುಗಳು ಹಾಗೂ ಸಾಂದರ್ಭಿಕ ದಾಖಲೆಗಳನ್ನು ಸಮರ್ಪಕವಾಗಿ ಪರಿಗಣಿಸಲಾಗುತ್ತಿಲ್ಲ ಎಂದು ಅವರು ಆರೋಪಿಸಿದರು.

ರಾಜ್ಯ ಉಸ್ತುವಾರಿ ಸಮಿತಿ ಜನವರಿ 6ರಂದು ಜಿಲ್ಲಾಧಿಕಾರಿಗೆ ನೀಡಿದ ನಿರ್ದೇಶನದಂತೆ ಮಹಜರ್ ವರದಿಯನ್ನು ದಾಖಲೆಯಾಗಿ ಪರಿಗಣಿಸಬೇಕಾಗಿದ್ದರೂ, ಅದರ ಮೂಲ ಉದ್ದೇಶವನ್ನು ಕಡೆಗಣಿಸಲಾಗುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಮಹಜರ್ ಸಂದರ್ಭದಲ್ಲಿ ಕೇವಲ ವೈಯಕ್ತಿಕ ದಾಖಲೆಗಳನ್ನು ಮಾತ್ರ ದಾಖಲಿಸಲಾಗುತ್ತಿದ್ದು, ಅರಣ್ಯವಾಸಿಗಳ ವಾಸ್ತವ್ಯ, ಗ್ರಾಮದಲ್ಲಿ ಜನವಸತಿ ಇರುವ ಕುರಿತು ಸಾಂದರ್ಭಿಕ ಮಾಹಿತಿಯನ್ನು ದಾಖಲಿಸಲಾಗುತ್ತಿಲ್ಲ. ಜೊತೆಗೆ, ಒಂದೇ ಕುಟುಂಬದ ಹಲವು ಅರ್ಜಿಗಳನ್ನು ಪರಿಗಣಿಸದಿರುವುದು ಕಾನೂನುಬಾಹಿರ ಕ್ರಮವಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಪ್ರಕ್ರಿಯೆ ಕಾನೂನು ಮತ್ತು ನಿಯಮಾವಳಿಗಳಿಗೆ ವಿರುದ್ಧವಾಗಿದ್ದು, ಈ ಬಗ್ಗೆ ರಾಜ್ಯ ಅರಣ್ಯ ಭೂಮಿ ಹಕ್ಕು ಉಸ್ತುವಾರಿ ಸಮಿತಿಗೆ ಆಕ್ಷೇಪ ಸಲ್ಲಿಸಲಾಗುವುದು ಎಂದು ರವೀಂದ್ರ ನಾಯ್ಕ ಹೇಳಿದರು.
ಈ ಸಂದರ್ಭದಲ್ಲಿ ಹೋರಾಟಗಾರರಾದ ಪಾಂಡುರಂಗ ನಾಯ್ಕ, ಚಂದ್ರ ನಾಯ್ಕ, ನಾರಾಯಣ ಶಿರಜ್ಜಿಮನೆ, ಪದ್ಮಾವತಿ ವೆಂಕಟೇಶ, ಮಾದೇವಿ ನಾಯ್ಕ, ಸುಬ್ರಾಯ ನಾಯ್ಕ ಬೈಲೂರು ಸೇರಿದಂತೆ ಇತರರು ಉಪಸ್ಥಿತರಿದ್ದರು
