ಭಟ್ಕಳ: ಕನ್ನಡ ನಾಡು ನುಡಿಯ ಅಭಿಮಾನ ಸದಾ ಜೀವಂತವಾಗಿರಬೇಕು ಎಂದು ನಿವ್ರತ್ತ ಶಿಕ್ಷಕ, ಸಹಕಾರಿ ಧುರೀಣ ಡಿ. ಬಿ. ನಾಯ್ಕ ನುಡಿದರು. ಅವರು
ಇಲ್ಲಿನ ಆನಂದಶ್ರಮ ಪ್ರೌಢ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 2024-25ನೇ ಸಾಲಿನ ಎಸ್. ಎಸ್. ಎಲ್. ಸಿ.ಯಲ್ಲಿ ಕನ್ನಡ ಭಾಷೆಗೆ ಪ್ರತಿಶತ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ವಿದ್ಯಾರ್ಥಿಗಳ ಸಾಧನೆಗೆ ಅವರ ಪರಿಶ್ರಮದ ಜೊತೆಗೆ ಶಿಕ್ಷಕರ ಬೆಂಬಲ, ಪಾಲಕರ ಪ್ರೋತ್ಸಾಹವೂ ಕೂಡ ಗಮನಾರ್ಹ. ವಿದ್ಯಾರ್ಥಿಗಳು ಸಾಹಿತ್ಯ ಪರಿಷತ್ತಿನ ಈ ಪ್ರೋತ್ಸಾಹದಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಶೈಕ್ಷಣಿಕ ಸಾಧನೆಗಳನ್ನು ಮಾಡುವಂತಾಗಬೇಕು ಎಂದರಲ್ಲದೆ ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳ ಜೊತೆಗೆ ಭಾಷ ಶಿಕ್ಷಕರನ್ನು ಕೂಡ ಅಭಿನಂದಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ ಈ ಬಾರಿ ಉತ್ತರ ಕನ್ನಡ ಜಿಲ್ಲೆಯಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಕನ್ನಡಿಗರ ಪ್ರಾಥಮಿಕ ಸಂಸ್ಥೆಯಾದ ಸಾಹಿತ್ಯ ಪರಿಷತ್ತು ನೀಡುವ ಪುರಸ್ಕಾರಕ್ಕೆ ತನ್ನದೇ ಆದ ಘನತೆ ಇದೆ. ಮುಂದಿನ ಬದುಕಲ್ಲಿ ಉತ್ತಮ ಸಾಧನೆಯನ್ನು ಮಾಡುವುದರ ಜೊತೆಗೆ ಎಷ್ಟೇ ಎತ್ತರಕ್ಕೇರಿದರು ನಮ್ಮೊಳಗಿನ ಕನ್ನಡತನವನ್ನು ಎಂದಿಗೂ ಕಾಪಾಡಿಕೊಳ್ಳಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ ಪ್ರಶಂಸನಾ ಪತ್ರ ಪ್ರಧಾನ ಮಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ಸಾಹಿತಿ ಮಾನಾಸುತ ಶಂಭು ಹೆಗಡೆ, ಸ್ಪಂದನ ಸಂಸ್ಥೆಯ ಉಪಾಧ್ಯಕ್ಷಧ್ಯ ಭವಾನಿಶಂಕರ ನಾಯ್ಕ, ಸಾಹಿತಿ ನಾರಾಯಣ ಯಾಜಿ ಶಿರಾಲಿ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ನಾಯಕ ಹಾಗೂ ಆನಂದಾಶ್ರಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ವಿನುತಾ ಡಿಸೋಜ,
ಹೊನ್ನಾವರ ತಾಲೂಕ ಕಸಾಪ ಅಧ್ಯಕ್ಷ ಎಸ್.ಎಚ್. ಗೌಡ,
ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಪ್ರಾಸ್ತಾವಿಕ ನುಡಿಗಳನ್ನಾಡಿ ಉತ್ತರ ಕನ್ನಡ ಜಿಲ್ಲೆಯಾದ್ಯoತ ಕನ್ನಡ ಭಾಷೆಗೆ ಪೂರ್ಣಾಂಕಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಪುರಸ್ಕರಿಸುವ ಕಾರ್ಯಕ್ರಮದ ಮೂಲಕ ಇಡೀ ಜಿಲ್ಲೆಯಲ್ಲಿ ಕನ್ನಡದ ಡಿಂಡಿಮ ಮೊಳಗುತ್ತಿದೆ. ಸಾಹಿತ್ಯ ಪರಿಷತ್ತು ವರ್ಷದುದ್ದಕ್ಕೂ ಕವಿಗೋಷ್ಠಿ, ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು, ಮನೆಯಂಗಳದಲ್ಲಿ ಕಾವ್ಯೋತ್ಸವ,ಪುಸ್ತಕ ಬಿಡುಗಡೆ, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ. ಅದರಲ್ಲಿ ಕನ್ನಡ ಭಾಷೆಗೆ ಪೂರ್ಣಾಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದಿಸುವ ಕಾರ್ಯಕ್ರಮ ವಿಶಿಷ್ಟವಾದುದು ಮತ್ತು ಆ ಮೂಲಕ ಉತ್ತರ ಕನ್ನಡ ಜಿಲ್ಲೆಯಾದ್ಯoತ ಕನ್ನಡದ ಡಿಂಡಿಮ ಮೊಳಗುತ್ತಿದೆ ಎಂದು ನುಡಿದರು.

ಕಸಾಪ ಗೌರವಕೋಶಾಧ್ಯಕ್ಷ ಶ್ರೀಧರ್ ಶೇಟ್ ಎಲ್ಲರನ್ನು ಸ್ವಾಗತಿಸಿದರೆ, ಗೌರವ ಕಾರ್ಯದರ್ಶಿ ನಾರಾಯಣ ನಾಯ್ಕ ನಿರೂಪಿಸಿದರು. ಗಣೇಶ ಯಾಜಿ ವಂದಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿಯ ಸದಸ್ಯರಾದ ಪೆಟ್ರಿಕ್ ಟೆಲಿಸ್, ಪೂರ್ಣಿಮಾ ಮುರುಡೇಶ್ವರ, ಗಣೇಶ್ ಕೃಷ್ಣ ಮೊಗೇರ್, ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪಾಲಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ 75 ವಿದ್ಯಾರ್ಥಿಗಳು ಹಾಗೂ 18 ಜನ ಭಾಷಾ ಶಿಕ್ಷಕರನ್ನು ಅಭಿನಂದಿಸಲಾಯಿತು.

