ಭಟ್ಕಳ-ಧಾರಾಕಾರ ಮಳೆ, ಸೊಳ್ಳೆ ಕಾಟದ ನಡುವೆಯೂ ಭಟ್ಕಳದ ಮುಂಡಳ್ಳಿ ಯ ಕಾಡಿನಲ್ಲಿ ಅವಿತು ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಗ್ರಾಮೀಣ ಠಾಣೆ ಪೊಲೀಸರು ದಾಳಿ ಮಾಡಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ನಡೆಸಿದ ಈ ಕಾರ್ಯಾಚರಣೆಯಲ್ಲಿ ನಾಲ್ವರು ಸಿಕ್ಕಿಬಿದ್ದಿದ್ದು, ಉಳಿದವರು ಓಡಿ ಪರಾರಿಯಾಗಿದ್ದಾರೆ.
ಸಿಕ್ಕಿಬಿದ್ದವರ ಬಳಿಯಿದ್ದ ಮೊಬೈಲು, ಸ್ಥಳದಲ್ಲಿ ಸಿಕ್ಕ ಬೈಕುಗಳನ್ನು ವಶಕ್ಕೆಪಡೆದ ಪೊಲೀಸರು ಒಟ್ಟು ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜುಲೈ 5ರಂದು ಮುಂಡಳ್ಳಿ ಅರಣ್ಯ ಪ್ರದೇಶದಲ್ಲಿ ಅಂದರ್ ಬಾಹರ್ ಆಟ ಜೋರಾಗಿತ್ತು. ಭಟ್ಕಳ ಕೆ ಬಿ ರಸ್ತೆಯ ಚೌಥಣಿಯ ರಾಘವೇಂದ್ರ ನಾಯಕ್, ಮುಂಡಳ್ಳಿ ನಾಸ್ತಾರದ ಶ್ರೀಧರ ಮೊಗೇರ, ಪುರವರ್ಗದ ಗೋಪಾಲ ನಾಯಕ ಹಾಗೂ ನಾಸ್ತಾರದ ಚಂದ್ರಶೇಖರ ಮೊಗೇರ್ ಜೊತೆ ಇನ್ನೂ ನಾಲ್ವರು ಹಣ ಹೂಡಿ ಆಟವಾಡುತ್ತಿದ್ದರು.
ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಅಲ್ಲಿ ಲಗ್ಗೆಯಿಟ್ಟರು. ಪೊಲೀಸರನ್ನು ನೋಡಿದ ನಾಲ್ವರು ಓಡಿ ಪರಾರಿಯಾದರು. ಉಳಿದ ನಾಲ್ವರನ್ನು ಪೊಲೀಸರು ಗಟ್ಟಿಯಾಗಿ ಹಿಡಿದುಕೊಂಡರು. ಅಲ್ಲಿದ್ದವರ ಬಳಿಯಿದ್ದ ನಾಲ್ಕು ಮೊಬೈಲು ಹಾಗೂ ಐದು ಬೈಕುಗಳನ್ನು ಜಪ್ತು ಮಾಡಿದರು. ಪೋಲಿಸರು ಸಿಕ್ಕಿ ಬಿದ್ದ ನಾಲ್ವರ ಜೊತೆ ಓಡಿ ಹೋದವರ ಹೆಸರುಪಡೆದು ಪ್ರಕರಣ ದಾಖಲಿಸಿದ್ದಾರೆ.