
ಸಿದ್ದಾಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ವಾಸದ ಮನೆಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾದ ಸಿದ್ದಾಪುರ ತಾಲೂಕಿನ ಶಿರಳಗಿ ಪಂಚಾಯತ್ ವ್ಯಾಪ್ತಿ ಬಿಕ್ಕಲಸೆ ಗ್ರಾಮದ ರಾಜಶೇಖರ್ ಮಡಿವಾಳ ಅವರ ಮನೆಗೆ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಭೇಟಿ ನೀಡಿ ಧನಸಹಾಯ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಇದೊಂದು ದುರದೃಷ್ಟಕರವಾದ ಘಟನೆ. ಮನೆಯ ದಿನನಿತ್ಯ ಬಳಸುವ ಪಾತ್ರೆ, ವಸ್ತ್ರ ಎಲ್ಲವೂ ಸುಟ್ಟು ಹೋಗಿರುವುದು ನಿಜಕ್ಕೂ ದುಃಖದ ಸಂಗತಿಯಾಗಿದೆ. ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ್ ಸಂತ್ರಸ್ತರ ಮನೆಗೆ ಭೇಟಿ ನೀಡಿ, ವೈಯಕ್ತಿಕ ಪರಿಹಾರ ನೀಡಿರುವುದು ಸಂತೋಷ. ಆದರೆ ಶಾಸಕರಾಗಿ ಸಂಪೂರ್ಣ ಮನೆ ನಿರ್ಮಾಣಕ್ಕೆ ಅನುದಾನ ಕೊಡಬೇಕು. ಹಿಂದಿನ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮನೆಗೆ ಹಾನಿ ಸಂಭವಿಸಿದಾಗ ಸರಕಾರದಿಂದ ಅನುದಾನ ನೀಡಿದ ಉದಾಹರಣೆಗಳು ತುಂಬಾ ಇದೆ. ಈ ಕೂಡಲೇ ಶಾಸಕ ಭೀಮಣ್ಣನವರು ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಿ, ಕನಿಷ್ಟ 5 ಲಕ್ಷ ರೂಪಾಯಿಯಷ್ಟು ಮುಖ್ಯಮಂತ್ರಿ ವಿಶೇಷ ಪರಿಹಾರ ಕೊಡಿಸಬೇಕೆಂದು ಅವರು ಆಗ್ರಹಿಸಿದರು.

ಈ ವೇಳೆ ಬಿಜೆಪಿ ಸಿದ್ದಾಪುರ ತಾಲೂಕಾಧ್ಯಕ್ಷ ಎಂ.ಕೆ.ತಿಮ್ಮಪ್ಪ ಸೇರಿದಂತೆ ಬಿಜೆಪಿಯ ಪ್ರಮುಖರು, ಸ್ಥಳೀಯರು ಇದ್ದರು.

