ಶಿರಸಿ: ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ಅವರ ಅತ್ಯಂತ ಕೆಟ್ಟ ಆಡಳಿತ ಮತ್ತು ಬೇಜವಾಬ್ದಾರಿತನದ ಪ್ರತಿಫಲವಾಗಿ ಕ್ಷೇತ್ರದ ರಸ್ತೆಗಳೆಲ್ಲವು ಹೊಂಡಮಯವಾಗಿದೆ. ಪಿಡಬ್ಲುಡಿ, ಪಿಆರ್ಇಡಿ, ನಗರ ವ್ಯಾಪ್ತಿಗಳಲ್ಲಿ ಹೊಂಡಮುಚ್ಚುವ ಕೆಲಸವನ್ನು ಇಲಾಖೆಗಳು ಮಾಡುತ್ತಿಲ್ಲ. ಶಾಸಕರಿಗೆ ನಯಾಪೈಸೆ ಜವಾಬ್ದಾರಿಯಿಲ್ಲ. ಈ ನಿಟ್ಟಿನಲ್ಲಿ ಸಹಾಯಕ ಆಯುಕ್ತರು ಸಾರ್ವಜನಿಕರೊಂದಿಗೆ ಸಮನ್ವಯ ಸಭೆ ನಡೆಸಿ, ರಸ್ತೆ ಗುಂಡಿ ಮುಚ್ಚುವುದು, ಮಳೆ ಮಾಪನ ಯಂತ್ರ ದುರಸ್ತಿ ಹಾಗು ಕೆಎಸ್ಸಾರ್ಟಿಸಿ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಆ.7 ಗುರುವಾರದಂದು ಬೆಳಿಗ್ಗೆ 11 ಗಂಟೆಗೆ ಶಿರಸಿ ಶ್ರೀಮಾರಿಕಾಂಬಾ ದೇವಾಲಯದಿಂದ ಸಹಾಯಕ ಆಯುಕ್ತರ ಕಛೇರಿ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಎ.ಸಿಯವರು ಜನರ ಸಮಸ್ಯೆಗೆ ಪರಿಹಾರ ನೀಡುವವರೆಗೂ ಧರಣಿ ನಡೆಸುತ್ತೇವೆ ಎಂದು ಸಾಮಾಜಿಕ ಹೋರಾಟಗಾರ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.
ಅವರು ಶಿರಸಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿದಿನ ಕ್ಷೇತ್ರದ ಸಮಸ್ಯೆಗಳಿಂದ ಜನ ಬೇಸತ್ತಿದ್ದಾರೆ. ಅತ್ಯಂತ ದುರದೃಷ್ಟಕರ ಪರಿಸ್ಥಿತಿ ಇದಾಗಿದೆ. ಸಮಸ್ಯೆ ಹೀಗೆಯೇ ಮುಂದುವರೆದರೆ ಜನರು ದಂಗೆ ಏಳುವುದರಲ್ಲಿ ಸಂಶಯವಿಲ್ಲ ಎಂದರು. ಶಿರಸಿ ಘಟಕದಲ್ಲಿ ಹತ್ತು ಲಕ್ಷ ಕಿಮೀ ಓಡಿದ 79 ಬಸ್ಸುಗಳು ಇವೆ. ಉತ್ತರ ಕರ್ನಾಟಕದಲ್ಲಿ ಓಡಿ ಗುಜರಿಗಳಿಗೆ ಹಾಕುವ ಬಸ್ ಗಳನ್ನೂ ಶಿರಸಿಗೆ ತಂದು ಹಾಕಲು ಇದೇನು ಕಸದಬುಟ್ಟಿನಾ? ಎಂದು ಕೆಎಸ್ಸಾರ್ಟಿಸಿಯ ಮೇಲೆ ಆಕ್ರೋಶ ಹೊರಹಾಕಿದರು. ಇನ್ನುಳಿದಂತೆ ಶಿರಸಿ ವಿಭಾಗದಲ್ಲಿ ಮೆಕ್ಯಾನಿಕ್ ಗಳ ಪೋಸ್ಟ್ 150ಕ್ಕೂ ಹೆಚ್ಚು ಖಾಲಿ ಇದೆ. ಸರಕಾರ ಅಧಿಕಾರಿಗಳಿಂದ ಸುಳ್ಳು ಹೇಳುವ ಕೆಲಸವನ್ನು ಮಾಡುತ್ತಿದ್ದಾರೆ. ಶಿರಸಿ, ಬನವಾಸಿ, ಯಲ್ಲಾಪುರ, ಸಿದ್ದಾಪುರ, ಮುಂಡಗೋಡು ಭಾಗದ ಎಲ್ಲಾ ರಸ್ತೆಗಳು ಸರಿ ಮಾಡಬೇಕು. ಈ ಹಿನ್ನಲೆಯಲ್ಲಿ ಪಾದಯಾತ್ರೆಯ ಮೂಲಕ ಎಸಿ ಕಚೇರಿಯವರೆಗೂ ಹೋಗಿ ಧರಣಿಯನ್ನು ನಡೆಸುತ್ತೇವೆ. ಸಹಾಯಕ ಆಯುಕ್ತರು ಎಲ್ಲಾ ಅಧಿಕಾರಿಗಳನ್ನು ಕರೆದು ಸಾರ್ವಜನಿಕ ಸಮನ್ವಯ ಸಭೆ ನಡೆಸಬೇಕು ಎಂದರು. ಮತ್ತು ನಮ್ಮ ಪಾದಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಅವರು ಕರೆ ನೀಡಿದರು.
ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಗ್ರಾಮ ಪಂಚಾಯತ್ ಗಳಿಗೆ ಅನುದಾನ ಬಾರದ ಕಾರಣದಿಂದಾಗಿ ಗ್ರಾಮೀಣ ಭಾಗದ ರಸ್ತೆಗಳೆಲ್ಲ ಹೊಂಡಮಯವಾಗಿದೆ. ರಸ್ತೆ ಸಮಸ್ಯೆಯಿಂದಲೇ ಬಸ್ ಗಳು ಹಾಳಾಗುತ್ತಿವೆ. ಶಾಸಕರು ಮಾತನಾಡುವಾಗ ಕೇವಲ ನಿಲೇಕಣಿ ರಸ್ತೆಯನ್ನು ಸರಿ ಪಡಿಸುವ ವಿಚಾರವನ್ನು ಹೇಳುತ್ತಾರೆ. ಗ್ರಾಮೀಣ ಭಾಗದಲ್ಲಿ ರಸ್ತೆ ಹದಗೆಟ್ಟಿರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ತೊಂದರೆ ಆಗುತ್ತಿದೆ. ಆದಷ್ಟು ಬೇಗ ಸಮಸ್ಯೆಯನ್ನು ಸರಿ ಪಡಿಸಬೇಕು ಎಂದರು.
ಹುತಗಾರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶೋಭಾ ನಾಯ್ಕ್ ಮಾತನಾಡಿ, ರಸ್ತೆಗಿಂತ ಹೊಂಡಗಳೇ ಹೆಚ್ಚಾಗಿರುವುದರಿಂದ ಜನರಿಗೆ ನಡೆದುಕೊಂಡು ಅಥವಾ ವಾಹನ ತೆಗೆದುಕೊಂಡು ಹೋಗಬೇಕಾ ಅನ್ನುವ ಸ್ಥಿತಿ ನಿರ್ಮಾಣವಾಗಿದೆ. ಜನರ ಸದ್ಯದ ಪರಿಸ್ಥಿತಿ ಹೇಗಿದೆ ಎಂದರೆ ಇನ್ಸೂರೆನ್ಸ್ ಮಾಡಿಕೊಂಡು ಓಡಾಡುವ ಸ್ಥಿತಿ ಬಂದಿದೆ. ಕೇವಲ ಜನಸಾಮಾನ್ಯರು ಧ್ವನಿ ಎತ್ತಿದರೆ ಮಾತ್ರ ಶಾಸಕರು ಕೆಲಸ ಮಾಡಿಸುತ್ತಾರಾ ಎಂದು ಮಾಧ್ಯಮದ ಮೂಲಕ ಶಾಸಕರಿಗೆ ಪ್ರಶ್ನಿಸಿದರು.
ಪ್ರಮುಖರಾದ ಜಯಶೀಲ ಗೌಡರ್ ಬಾಶಿ ಮಾತನಾಡಿ, ನಗರ ಅಷ್ಟೇ ಅಲ್ಲದೆ ಗ್ರಾಮೀಣ ಭಾಗದ ರಸ್ತೆಗಳು ಕೂಡ ಹಾಳಾಗಿದ್ದು, ಅಪಘಾತಗಳು ಹೆಚ್ಚಾಗಲು ಮುಖ್ಯ ಕಾರಣ ಎಂದರೆ ರಸ್ತೆ ದುರಸ್ಥಿಯಾಗಿರುವುದು. ರಸ್ತೆ ಇಲ್ಲ ಎಂದರೆ ಜನ ಸಂಪರ್ಕವೇ ಹಾಳಾಗುತ್ತದೆ. ಜನರ ಕಷ್ಟ ಸ್ಪಂಧಿಸದೆ ಸರ್ಕಾರ ವಿಫಲವಾಗುತ್ತಿದೆ ಎಂದರು.
ಹಿರಿಯ ಇಂಜಿನಿಯರ್ ಅನಿಲ್ ಕರಿ ಮಾತನಾಡಿ, ಪ್ರತಿಯೊಂದು ವ್ಯವಸ್ಥೆ ಬೇಕಾದರೆ ಇಂದು ಹೋರಾಟದ ಮೂಲಕವೇ ಪಡೆದುಕೊಳ್ಳುವ ಸ್ಥಿತಿ ಬಂದಿದೆ. ಪ್ರತಿಯೊಬ್ಬರಿಗೂ ಸಂವಿಧಾನದಲ್ಲಿ ರಸ್ತೆ ಮೇಲೆ ಸುರಕ್ಷಿತವಾಗಿ ಓಡಾಡುವ ಹಕ್ಕಿದೆ. ಅದನ್ನು ನಾವೇ ಕೇಳಿಕೊಳ್ಳುವ ಪರಿಸ್ಥಿತಿ ಬರಬಾರದು ಎಂದರು.
ಮಾಜಿ ಜಿಪಂ ಸದಸ್ಯ ಹಾಲಪ್ಪ ಜಕ್ಕಣ್ಣನವರ್ ಮಾತನಾಡಿ, ವಾಹನಗಳಿಗೆ ಇಂತಷ್ಟೆ ಕಿಮೀ ಚಲಾಯಿಸಬೇಕು ಎನ್ನುವ ನಿಯಮವಿದೆ. ಆದರೂ ಮತ್ತೆ ಅದೇ ಬಸ್ ಗಳನ್ನೂ ಚಲಾಯಿಸಿದರೆ ರಸ್ತೆ ಮಧ್ಯದಲ್ಲಿಯೇ ಹಾಳಾಗುವುದರ ಜೊತೆಗೆ ಅಪಘಾತಗಳು ಸಂಭವಿಸುತ್ತವೆ ಎಂದರು.ಸುದ್ಧಿಗೋಷ್ಟಿಯಲ್ಲಿ ಹಿರಿಯ ಸಹಕಾರಿ ವಿ.ಎಂ.ಹೆಗಡೆ ಕಬ್ಬೆ, ರಾಘವೇಂದ್ರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.