ಭಟ್ಕಳ-ಸಚಿವ ಮಂಕಾಳ್ ವೈದ್ಯರು ಚುನಾವಣೆಯಲ್ಲಿ ಒಂದು ಕೋಮಿಗೆ ನೀಡಿದ ಭರವಸೆಯನ್ನು ಈಡೇರಿಸುವುದಕ್ಕಾಗಿ ಭಟ್ಕಳ ಪುರಸಭೆಗೆ, ಜಾಲಿ ಪಟ್ಟಣ ಪಂಚಾಯಿತಿ ಮತ್ತು ಹೆಬಳೆ ಗ್ರಾಮ ಪಂಚಾಯತ್‍ನ್ನು ಮಾತ್ರ ಸೇರಿಸಿ ಅವೈಜ್ಞಾನಿಕವಾಗಿ ನಗರಸಭೆಯನ್ನಾಗಿಸಿದ್ದು ಬಡವರಿಗೆ ಮತ್ತು ಹಿಂದೂ ಸಮಾಜದಕ್ಕೆ ಮಾಡಿದ ದ್ರೋಹವಾಗಿದೆ ಎಂದು ಮಾಜಿ ಶಾಸಕ ಸುನೀಲ್ ನಾಯ್ಕ್ ಆರೋಪಿಸಿದ್ದಾರೆ. ಈಗಾಗಲೇ ಭಟ್ಕಳದಲ್ಲಿ ಸಚಿವ ಮಂಕಾಳ್ ವೈದ್ಯರ ಈ ಷಡ್ಯಂತ್ರವನ್ನು ಖಂಡಿಸಿದ್ದೇವೆ ಎಂದು ಭಟ್ಕಳ ಬಿಜೆಪಿ ಘಟಕ ತಿಳಿಸಿದೆ.
ಈ ಹೋರಾಟದ ಮುಂದಿನ ಭಾಗವಾಗಿ, ಬೆಂಗಳೂರು ವಿಧಾನಸೌಧದಲ್ಲಿ ಮಳೆಗಾಲದ ಅಧಿವೇಶನ ನಡೆಯುತ್ತಿರುವುದರಿಂದ, ಸಚಿವರ ಈ ಷಡ್ಯಂತ್ರದ ಕುರಿತು ಸದನದ ಗಮನಕ್ಕೆ ತಂದು ಭಟ್ಕಳದ ಹಿಂದೂ ಸಮಾಜಕ್ಕೆ ಮತ್ತು ಬಡವರಿಗೆ ನ್ಯಾಯ ವದಗಿಸುವಂತೆ, ಅಭಿವೃದ್ಧಿಯೇಮಾನದಂಡವಾಗಿದ್ದರೆ ಜನಸಂಖ್ಯೆಯ ಆಧಾರದ ಮೇಲೆ ನಗರಸಭೆಗೆ ಶಿರಾಲಿ, ಮುಂಡಳ್ಳಿ, ಮಾವಿನಕುರ್ವೆ, ಮುಟ್ಟಳ್ಳಿ, ಯಲ್ವಡಿಕವೂರ್ ಹೀಗೆ ಹತ್ತಿರದ ಪಂಚಾಯತ್ ಗಳನ್ನು ಸೇರಿಸಿ ಸಾಮಾಜಿಕ ನ್ಯಾಯ ವದಗಿಸುವಂತೆ, ಇಲ್ಲವಾದಲ್ಲಿ ಈ ಯೋಜನೆಯನ್ನು ಕೈ ಬಿಡುವಂತೆ ವಿಧಾನಸಭೆಯಲ್ಲಿ ಆಗ್ರಹಿಸಲು ಬಿಜೆಪಿ ರಾಜ್ಯದ್ಯಕ್ಷರಾದ ಸನ್ಮಾನ್ಯ ಶ್ರೀ ಬಿ ವೈ ವಿಜಯೇಂದ್ರ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಾಗಿ ಭಟ್ಕಳ ಬಿಜೆಪಿ ನಿಯೋಗ ತಂಡ ಮನವಿ ನಿಡಿದರು.ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಬಿಜೆಪಿ ರಾಜ್ಯದ್ಯಕ್ಷರು ಈ ಕುರಿತು ಸದನದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಮಾಜಿ ಶಾಸಕ ಸುನೀಲ್ ನಾಯ್ಕ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಎನ್‌ಎಸ್ ಹೆಗಡೆ, ಭಟ್ಕಳ ಮಂಡಲದ ಅಧ್ಯಕ್ಷರಾದ ಲಕ್ಷ್ಮಿನಾರಾಯಣ ನಾಯ್ಕ್, ಮಾಜಿ ಸಚಿವರಾದ ಶ್ರೀ ಶಿವಾನಂದ ನಾಯ್ಕ, ಮಾಜಿ ಶಾಸಕರಾದ ಸುನೀಲ್ ನಾಯ್ಕ, ಬಿಜೆಪಿ
ಮುಖಂಡರಾದ ಸುಬ್ರಾಯ ದೇವಾಡಿಗ, ಗೋವಿಂದ ನಾಯ್ಕ, ಶ್ರೀನಿವಾಸ್ ನಾಯ್ಕ್, ಶ್ರೀಕಾಂತ್ ನಾಯ್ಕ್, ಉಮೇಶ್ ನಾಯ್ಕ್,ಮುಂತಾದವರು ಉಪಸ್ಥಿತರಿದ್ದರು.