ಭಟ್ಕಳ-ಭಟ್ಕಳದ ನಗರ ಭಾಗದ ರಾಜಾಂಗಣದಲ್ಲಿರುವ ಪುರಾತನ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮೀನು ಮಾರುಕಟ್ಟೆಯನ್ನು ಸೆಪ್ಟೆಂಬರ್ 1 ರಂದು ಯಾವುದೇ ಆಗುಹೋಗುಗಳ ಬಗ್ಗೆ ಪರಾಮರ್ಶೆ ನಡೆಸದೆ ಬಡ ಮೀನುಗಾರರಿಗೆ ಮಾಹಿತಿ ನೀಡದೆ ಏಕಾಏಕಿ ಮೀನುಮರುಕಟ್ಟೆ ಸ್ಥಳಾಂತರವನ್ನು ವಿರೋಧಿಸಿ ಭಟ್ಕಳ ತಾಲೂಕ ಮೀನುಗಾರರು ಮತ್ತು ಮೀನು ಮಾರಾಟಗಾರರ ಸಂಘದ ವತಿಯಿಂದ ಮಂಗಳವಾರ ಭಟ್ಕಳ ಸಹಾಯಕ ಆಯುಕ್ತರಿಗೆ ಮನವಿ ನೀಡಿದರು. ಈ ಮೀನು ಮಾರುಕಟ್ಟೆಯಲ್ಲಿ ನೂರಾರು ವರ್ಷಗಳಿಂದ 150 ರಿಂದ 200 ಬಡ ಮೀನುಗಾರ ಮಹಿಳೆಯರು ಮೀನು ಮಾರಾಟ ಮಾಡುತ್ತ ಬಂದಿದ್ದಾರೆ. ಈ ಮೀನು ಮಾರುಕಟ್ಟೆ ಸ್ಥಳಾಂತರ ಇದು ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕುತಂತ್ರದ ನಡೆಯಾಗಿದೆ. ಇಲ್ಲಿ ಬಡ ಮೀನುಗಾರರಿಗೆ ಯಾವುದೇ ಭರವಸೆ ನೀಡದೆ, ಸ್ಥಳಾಂತರಿಸಲಾಗುತ್ತಿದೆ. ಮೀನು ಮಾರುಕಟ್ಟೆಗೆ ಬರುವ ಜನರ ವ್ಯಾಪಾರ ವಹಿವಾಟನ್ನು ನಂಬಿಕೊಂಡಿರುವ ಬಡ ಅಂಗಡಿಕಾರರನ್ನು, ಬೀದಿ ಬದಿ ತರಕಾರಿ, ಚಿಕನ್ ವ್ಯಾಪಾರಸ್ಥರನ್ನು, ಬಡ ಆಟೋ ಚಾಲಕರನ್ನು ಸಂಕಷ್ಟಕ್ಕೆ ಸಿಲುಕಿಸುವ ಕುತಂತ್ರವಾಗಿದೆ.
ಭಟ್ಕಳ ಪುರಸಭೆ ಕಟ್ಟಡ ನವೀಕರಣದ ಹೆಸರಿನಲ್ಲಿ ನೂರಾರು ಇತಿಹಾಸ ಹೊಂದಿರುವ ಮೀನು ಮಾರುಕಟ್ಟೆಯನ್ನು ಸ್ಥಳಾಂತರಿಸಿ ಬಡ ಮೀನುಗಾರರನ್ನು ಒಕ್ಕಲೆಬ್ಬಿಸುತ್ತಿದೆ. ಮೀನು ಮಾರುಕಟ್ಟೆ ಇರುವ ಪ್ರದೇಶದಲ್ಲಿ ಭಟ್ಕಳ ಪುರಸಭೆಯ ಕಟ್ಟಡ ನವೀಕರಣಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಆದರೆ ಅದೇ ಸ್ಥಳದಲ್ಲಿ ಮೀನು ಮಾರುಕಟ್ಟೆ ನಿರ್ಮಿಸಿ ಕೊಡುವ ಯಾವುದೇ ಭರವಸೆಯನ್ನು ನೀಡಿಲ್ಲ. ಇಲ್ಲಿ ದೊಡ್ಡ ದೊಡ್ಡ ಉದ್ಯಮಿಗಳಿಗೆ ಅನುಕೂಲ ಮಾಡಿ ಕೊಡುವ ಉದ್ದೇಶದಿಂದ ಮೀನು ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗುತ್ತಿದೆ.
ಪುರಸಭಾ ಅಧಿಕಾರಿಗಳು ನೂತನ ಕಟ್ಟಡದ ನೀಲಿನಕ್ಷೆಯನ್ನು ತಯಾರಿಸಿ ಅದೇ ಕಟ್ಟಡದಲ್ಲಿ ಮೀನು ಮಾರುಕಟ್ಟೆಯನ್ನು ನಿರ್ಮಿಸಿ ಬಡ ಮೀನುಗಾರರಿಗೆ ಅವಕಾಶ ಕಲ್ಪಿಸುವ ಬಗ್ಗೆ ಠರಾವು ಮಾಡಿ ಸೂಕ್ತ ಭರವಸೆ ನೀಡಿದರೆ ತಾತ್ಕಾಲಿಕವಾಗಿ ಸ್ಥಳಾಂತರಗೊಳ್ಳಲು ನಮ್ಮದೇನು ಅಭ್ಯಂತರವಿಲ್ಲ. ಅದನ್ನು ಬಿಟ್ಟು ಕುತಂತ್ರದಿಂದ ಪುರಾತನ ಇತಿಹಾಸ ಹೊಂದಿರುವ ಭಟ್ಕಳ ಮೀನು ಮಾರುಕಟ್ಟೆಯನ್ನು ಒಕ್ಕಲೆಬ್ಬಿಸಲು ಹುನ್ನಾರ ನಡೆಸಿದರೆ ತಾವು ಯಾವುದೇ ರೀತಿ ಉಗ್ರ ಹೋರಾಟಕ್ಕೆ ಸಿದ್ಧವಿರುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.. ಈ ಹಿಂದೆಯೂ ಕೆಲವು ಘಟನೆಗಳ ಬಗ್ಗೆ ಪುರಸಭೆಗೆ ಅರಿವಿದೆ ಎನ್ನುವುದನ್ನು ನಾವು ಭಾವಿಸಿದ್ದೇವೆ ಎಂದು ತಿಳಿಸಿದ್ದಾರೆ.
ಮಾನ್ಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸನ್ಮಾನ್ಯ ಶ್ರೀ ಮಂಕಾಳು ಎಸ್ ವೈದ್ಯರವರು ಈ ಕೂಡಲೇ ಮಧ್ಯ ಪ್ರವೇಶಿಸಿ ಭಟ್ಕಳ ಪುರಸಭೆಯ ಕುತಂತ್ರದ ನಡೆಯನ್ನು ತಡೆಹಿಡಿಯಬೇಕೆಂದು ಸಚಿವರಲ್ಲಿ ಆಗ್ರಹಿಸುತ್ತಿದ್ದಾರೆ. ಬಡ ಮೀನುಗಾರರ ಹಾಗೂ ಬಡ ಅಂಗಡಿಕಾರರ ಹಿತ ದೃಷ್ಟಿಯಿಂದ ಪುರಾತನ ಮೀನು ಮಾರುಕಟ್ಟೆಯನ್ನು ಅಲ್ಲಿಯೇ ಉಳಿಸಿಕೊಳ್ಳುತ್ತೀರಿ ಎನ್ನುವ ಭರವಸೆ ಇದೆ. ವ್ಯತಿರಿಕ್ತವಾದರೆ ಮುಂದಾಗುವ ಅನಾಹುತಕ್ಕೆ ತಾವೇ ಜವಾಬ್ದಾರರಾಗಿರುತ್ತೀರಿ. ಬಲವಂತದ ಸ್ಥಳಾಂತರಕ್ಕೆ ಪ್ರಯತ್ನಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ನಿಮಗೆ ಮುಳುವಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಮಾಜಿ ಪುರಸಭಾ ಸದಸ್ಯ ಶ್ರೀಕಾಂತ ನಾಯ್ಕ, ಸಾಮಾಜಿಕ ಹೋರಾಟಗಾರ ವಿವೇಕ್ ನಾಯ್ಕ ಅಸರಕೇರಿ,ಪಾಂಡು ನಾಯ್ಕ , ಚಂದ್ರಹಾಸ ನಾಯ್ಕ, ರಾಮ ಬಳಿಗಾರ್, ಕೊರಗ ಮೊಗೇರ್, ನೂರಾರು ಮೀನುಗಾರ ಮಹಿಳೆಯರು ಮುಂತಾದವರು ಉಪಸ್ಥಿತರಿದ್ದರು.