ಭಟ್ಕಳ: ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯು ಆಯೋಜಿಸಿದ್ದ “ನ್ಯಾಯದ ಅಧಿಕಾರ – ಪ್ರವಾದಿ ಮಹಮ್ಮದ್ ಪೈಗಂಬರ್ ಸೀರತ್ ಅಭಿಯಾನ” ದ ಸಮಾರೋಪ ಸಮಾರಂಭದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಶ್ರೀಧರ್ ಶೇಟ್ ಶಿರಾಲಿ ಅವರನ್ನು ಜಮಾಅತ್ ನ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ.ಅಭಿನಂದಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯಮಟ್ಟದ ಪ್ರಶಸ್ತಿ ಪಡೆದ ನಂತರ ಅನೇಕ ಕಡೆ ಸನ್ಮಾನಗಳು ನಡೆದಿದ್ದರೂ, “ಇಂದಿನ ಈ ಸನ್ಮಾನವೇ ನನಗೆ ವಿಶೇಷ. ಏಕೆಂದರೆ ಇಲ್ಲಿ ಎಲ್ಲ ಸಮುದಾಯದವರೂ ಒಂದೇ ವೇದಿಕೆಯಲ್ಲಿ ಸೇರಿಕೊಂಡಿದ್ದಾರೆ” ಎಂದು ಶಿರಾಲಿ ಹರ್ಷ ವ್ಯಕ್ತಪಡಿಸಿದರು. ಇಂದಿನ ಮೊಬೈಲ್ ಯುಗದಲ್ಲಿ ‘ವಾಟ್ಸಾಪ್ ಯೂನಿವರ್ಸಿಟಿಗಳು’ ಧರ್ಮಧರ್ಮಗಳ ನಡುವೆ ಗೋಡೆಗಳನ್ನು ಕಟ್ಟುತ್ತಿವೆ. ಜನರು ಮೊಬೈಲ್ ಜಗತ್ತಿನಲ್ಲಿ ಮುಳುಗಿ, ಮಾನವೀಯ ಅಂತಃಕರಣವನ್ನು ಮರೆತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.
ಮೊಬೈಲ್ ವ್ಯಸನದ ಪರಿಣಾಮವನ್ನು ಹಾಸ್ಯಭರಿತ ಉದಾಹರಣೆಗಳ ಮೂಲಕ ವಿವರಿಸಿದ ಅವರು, ಮಗನಿಗೆ ಫೇಸ್‌ಬುಕ್ನಲ್ಲಿ 5000 ಸ್ನೇಹಿತರಿದ್ದಾರೆ, ಆದರೆ ಕಷ್ಟ ಬಂದಾಗ ನೆರವಿಗೆ ಯಾರೂ ಬರುವುದಿಲ್ಲ. ಇತ್ತ ತಂದೆ ಪಾಸ್‌ಬುಕ್ ನೋಡುತ್ತಾ, ಮನೆ ಕಟ್ಟುವುದು, ಮದುವೆ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿ ಬದುಕುತ್ತಿದ್ದಾರೆ. ಮಗಳು ಗ್ಯಾಲರಿಯಲ್ಲಿರುವ ಫೋಟೋಗಳಲ್ಲಿ ತಲ್ಲೀನಳಾಗಿದ್ದರೆ, ತಾಯಿ ಜುವೆಲರಿಯ (ಒಡವೆ) ಲೆಕ್ಕಾಚಾರದಲ್ಲಿ ತಲ್ಲೀನಳಾಗಿದ್ದಾಳೆ” ಎಂದ ಅವರು, ಇಂತಹ ಪರಿಸ್ಥಿತಿಯಲ್ಲಿ ಮಾನವೀಯ ಮೌಲ್ಯಗಳನ್ನು ಮರೆಯಬಾರದು,“ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು ಎಂಬ ಭಾವನೆ ಬಲವಾಗಬೇಕು” ಎಂದು ಆಶಿಸಿದರು.ಸಂಘಟಕರು ಶ್ರೀಧರ್ ಶೇಟ್ ಶಿರಾಲಿ ಅವರನ್ನು ಕವಿ, ಲೇಖಕ, ಅಂಕಣಕಾರ, ವ್ಯಂಗ್ಯಚಿತ್ರಕಾರ, ಚಿತ್ರಕಲಾವಿದ, ವಾಗ್ಮಿ ಹಾಗೂ ವ್ಯಕ್ತಿತ್ವ ವಿಕಸನ ಮಾರ್ಗದರ್ಶಕ ಎಂಬ ಬಹುಮುಖ ಪ್ರತಿಭೆಯೊಂದಿಗೆ ಜನಪ್ರಿಯ ಶಿಕ್ಷಕರಾಗಿ ಪರಿಚಯಿಸಿ, ಕರ್ನಾಟಕ ಸರ್ಕಾರವು 2025–26ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಎಂಬುದನ್ನು ನೆನಪಿಸಿದರು.
ವೇದಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ವಲಯ ಸಂಚಾಲಕ ಸಯೀದ್ ಇಸ್ಮಾಯಿಲ್, ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪ್ರೋ.ಆರ್.ಎಸ್.ನಾಯಕ, ಡಾ.ಸವಿತಾ ಕಾಮತ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್.ನಾಯ್ಕ, ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ರಾಮಾಮೋಗೆರ್, ಕನ್ನಡ ಸಾಹಿತ್ಯಪರಿಷತ್ ಅಧ್ಯಕ್ಷ ಗಂಗಾಧರ್ ನಾಯ್ಕ, ಸದ್ಭಾವನಾ ಮಂಚ್ ಅಧ್ಯಕ್ಷ ಸತೀಶಕುಮಾರ್ ನಾಯ್ಕ ಉಪಸ್ಥಿತರಿದ್ದರು.ಸೀರತ್ ಅಭಿಯಾನದ ಸಂಚಾಲಕ ಎಂ.ಆರ್.ಮಾನ್ವಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಅಬ್ದುಲ್ ರವೂಫ್ ಸವಣೂರ್ ಧನ್ಯವಾದ ಅರ್ಪಿಸಿದರು.