ಹೊನ್ನಾವರ-ಹೊನ್ನಾವರದ ಉಪನೋಂದಣಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ಡಿ.ವೈ.ಎಸ್.ಪಿ ಧನ್ಯಾ ನಾಯಕ ನೇತೃತ್ವದ ತಂಡ ಇಂದು ಸಂಜೆ
ದಾಳಿ ಮಾಡಿದ್ದಾರೆ. ರಾತ್ರಿಯಾದರೂ ಲೋಕಾಯುಕ್ತ ಅಧಿಕಾರಿಗಳು ಮನೆಗೆ ಹೋಗದೇ ಕಚೇರಿಯಲ್ಲಿ ನ ಕಡತ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಗುರುವಾರ ಸಂಜೆ 5 ಗಂಟೆ ವೇಳೆಗೆ ಹೊನ್ನಾವರ ಉಪ ನೋಂದಣಾಧಿಕಾರಿ ಕಚೇರಿ ಅಧಿಕಾರಿ-ಸಿಬ್ಬಂದಿ ತಮ್ಮ ದೈನಂದಿನ ಸರಕಾರಿ ಕೆಲಸ ಮುಗಿಸಿ ಮನೆಗೆ ಹೋಗುವ ಸಿದ್ಧತೆಯಲ್ಲಿ ತೊಡಗಿದ್ದರು. ಇನ್ನೇನು ಕಚೇರಿಗೆ ಬೀಗ ಹಾಕಿ ಹೊರಡಬೇಕು ಎನ್ನುವಷ್ಟರಲ್ಲಿ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯಕ ಅವರ ನೇತೃತ್ವದ ಲೋಕಾಯುಕ್ತರ ತಂಡದ ಜೀಪು ಸಡನ್ನಾಗಿ ಅಲ್ಲಿಗೆ ಆಗಮಿಸಿತು. ಇನ್ಸಪೆಕ್ಟರ್ ರವಿ ಹಾಗೂ ಇನ್ನಿತರ ಸಿಬ್ಬಂದಿ ನೋಂದಣಾಧಿಕಾರಿ ಕಚೇರಿ ಒಳಗೆ ಪ್ರವೇಶಿಸಿ ವಿವಿಧ ದಾಖಲೆ ಪ್ರಶ್ನಿಸಿದರು. ಲೋಕಾಯುಕ್ತರ ಆಗಮನದಿಂದ ತಬ್ಬಿಬ್ಬಾದ ಅಲ್ಲಿದ್ದ ಅಧಿಕಾರಿ-ಸಿಬ್ಬಂದಿ ಕೆಲ ಕಾಲ ಲೋಕಾಯುಕ್ತ ರ ಪ್ರಶ್ನೆ ಗೆ ಉತ್ತರಿಸಲು ತಡವರಿಸಿದರು.
ಹೊನ್ನಾವರ ಉಪ ನೋಂದಣಾಧಿಕಾರಿ ಕಚೇರಿಯ ಲಂಚಾವತಾರದ ಬಗ್ಗೆ ಅನೇಕ ಆರೋಪಗಳು ಕೇಳಿ ಬಂದಿದ್ದವು. ಆ ಬಗ್ಗೆಯೂ ಲೋಕಾಯುಕ್ತರು ಪರಿಶೀಲಿಸಿದರು. ಸಂಜೆ ಮನೆಗೆ ಹೋಗುವ ವೇಳೆ ಅಧಿಕಾರಿ-ಸಿಬ್ಬಂದಿ ಲೆಕ್ಕಕ್ಕೆ ಬಾರದ ಕೆಲ ಹಣ ಕೊಂಡು ಒಯ್ಯುತ್ತಿರುವ ಬಗ್ಗೆ ಆರೋಪವಿದ್ದು, ಸಂಜೆ ಅವಧಿಯಲ್ಲಿಯೇ ಅಲ್ಲಿನವರು ಸಿಕ್ಕಿಬಿದ್ದರು.
ಹೀಗಾಗಿ ಲೋಕಾಯುಕ್ತ ರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದರು. ನಂತರ ಸುಧಾರಿಸಿಕೊಂಡು ಕೇಳಿದ ಪ್ರಶ್ನೆಗೆ ಉತ್ತರಿಸಲು ಶುರು ಮಾಡಿದರು. ಲೋಕಾಯುಕ್ತ ಅಧಿಕಾರಿಗಳು ಅನೇಕ ದಾಖಲೆಗಳನ್ನು ತಪಾಸಣೆಗೆ ಒಳಪಡಿಸಿದರು. ರಾತ್ರಿಯವರೆಗೂ ನೋಂದಣಾಧಿಕಾರಿ ಕಚೇರಿಯಲ್ಲಿನ ಕಡತಗಳ ಪರಿಶೀಲನೆ ನಡೆಯುತ್ತಿದೆ.ಇನ್ನು ಹೆಚ್ಚಿನ ಮಾಹಿತಿ
ತಿಳಿದು ಬರಬೇಕಿದೆ.