
ಭಟ್ಕಳ: ಭಟ್ಕಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇಲ್ಲಿನ ಶಿರಾಲಿಯ ಸಾಲೆಮನಿಯ ಮಠದ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ದಸರಾ ಕ ಕಾವೋತ್ಸವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು ಕಾರ್ಯಕ್ರಮವನ್ನು ನ್ಯಾಯವಾದಿ ಹಾಗೂ ಸಾಹಿತಿ ಶಂಕರ್ ಕೆ. ನಾಯ್ಕ ಉದ್ಘಾಟಿಸಿದರು. ಸುತ್ತಮುತ್ತಲಿನ ವಿದ್ಯಮಾನಗಳಿಗೆ ಕವಿಮನಸಿನ ಪ್ರತಿಸ್ಪಂದನದಿಂದ ಕಾವ್ಯ ಸೃಷ್ಡಿಯಾಗುತ್ತದೆ.
ಅಂತಹ ಕಾವ್ಯ ಸಮಾಜಕ್ಕೆ ಬೆಳಕನ್ನು ಚೆಲ್ಲುತ್ತದೆ. ಉತ್ತರಕನ್ನಡ ಜಿಲ್ಲೆಯ ದಿನಕರ ದೇಸಾಯಿ, ಗೌರೀಶ ಕಾಯ್ಕಿಣಿ, ಚಿತ್ತಾಲ, ವಿಡಂಬಾರಿಯವರು
ಈ ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ.
ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ದಸರಾ ಕಾವ್ಯೋತ್ಸವದಂತಹ ಕಾರ್ಯಕ್ರಮದ ಮೂಲಕ ಸಾಹಿತ್ಯಾಸಕ್ತರಿಗೆ, ಬರೆಹಗಾರರಿಗೆ ವೇದಿಕೆಯನ್ನೊದಗಿಸುತ್ತಿರುವುದು ಅಭಿನಂದನಾರ್ಹ ಎಂದು ನುಡಿದು ಸ್ವರಚಿತ ಕವಿತೆ ವಾಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ದೇವಾಲಯಗಳು ಧಾರ್ಮಿಕ ಜಾಗೃತಿಯನ್ನು ಮೂಡಿಸುವ ಜೊತೆಗೆ ವೈಚಾರಿಕತೆಯನ್ನು ಮೂಡಿಸುವ ಕೇಂದ್ರವೂ ಆಗಬೇಕು. ಈ ನೆಲೆಯಲ್ಲಿ ದಸರಾ ಕಾವ್ಯೋತ್ಸವ ಸಿದ್ಧಿವಿನಾಯಕ ದೇಗುಲದಲ್ಲಿ ನಡೆಯುತ್ತಿರುವುದು ವಿಶೇಷ. ಈ ಸಂದರ್ಭದಲ್ಲಿ ಮಠದ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಮಂಡಳಿ ಸಾಹಿತ್ಯಿಕ ಕಾರ್ಯಕ್ರಮದ ಜೊತೆಗೆ ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿ ಪುರಸ್ಕರಿಸುತ್ತಿರುವುದು ವಿಶಿಷ್ಠವಾಗಿದೆ.
ಇಂತಹ ಕಾರ್ಯಕ್ರಮದ ಮೂಲಕ ಹಿರಿಯ ಕವಿಗಳ ಜೊತೆಗೆ ಉದಯೋನ್ಮುಖ ಕವಿಗಳಿಗೆ ವೇದಿಕೆಯನ್ನೊದಗಿಸುವ ಕಾರ್ಯವನ್ನು ಪರಿಷತ್ತು ಮಾಡುತ್ತಿದೆ ಎಂದರು.
ಕವಿಗೋಷ್ಠಿಯಲ್ಲಿ ಸಾಹಿತಿ ಶ್ರೀಧರ ಶೇಟ್, ಸುರೇಶ್ ಮುರ್ಡೇಶ್ವರ, ನಂದನನಾಯ್ಕ, ಎಚ್.ಎನ್. ನಾಯ್ಕ, ರಾಘವೇಂದ್ರ ಮಡಿವಾಳ,ಕೃಷ್ಣ ಮೊಗೇರ ಅಳ್ವೆಕೋಡಿ,ರಾಜೀವಿ ಮೊಗೇರ್, ಹೇಮಲತಾ ರಾವ್, ನಾಗರತ್ನ ನಾಯ್ಕ ಮುಂತಾದ ಕವಿಗಳು ಸ್ವರಚಿತ ಕವಿತೆ ವಾಚಿಸಿದರು. ಶಿಕ್ಷಕ ದೇವಿದಾಸ ನಾಯ್ಕ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರೆ ಹೇಮಲತಾ ರಾವ್ ಕಾರ್ಯಕ್ರಮ ನಿರೂಪಿಸಿ ಸ್ವರಚಿತ ಕವಿತೆ ವಾಚಿಸಿದರು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ.ಮತ್ತು ಪದವಿ ಪೂರ್ವ ಹಂತದಲ್ಲಿ ಉತ್ತಮ ಸಾಧನೆ ಗೈದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿಯ ಮಂಜುನಾಥ ನಾಯ್ಕ, ರಾಜೇಶ ಮೊಗೇರ್ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.

