ಭಟ್ಕಳ-ಭಟ್ಕಳ -ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಮರಳಿನ ಅಭಾವದ ಕುರಿತು ಕಾಂಗ್ರೆಸ್ ಮುಖಂಡರು ಆಡಳಿತ ಪಕ್ಷದಲ್ಲಿದ್ದುಕೊಂಡು ಕೆಲವು ಅರ್ಥಹೀನವಾದ ಹೇಳಿಕೆಗಳನ್ನು ಕೆಲ ದಿನಗಳಿಂದ ಮಾಧ್ಯಮದ ಮುಂದೆ ನೀಡುತ್ತಿದ್ದಾರೆ ಎಂದು ಮಾಜಿ ಶಾಸಕ ಸುನೀಲ್ ನಾಯ್ಕ್ ಇಂದು ಭಟ್ಕಳ ಬಿಜೆಪಿ ಮಂಡಲದ ವತಿಯಿಂದ ಭಟ್ಕಳದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.2013-2018 ರ ವರೆಗೆ ಈಗಿನ ಸಚಿವ ಮಂಕಾಳ್ ವೈದ್ಯರು ಶಾಸಕರಿದ್ದ ಸಂದರ್ಭದಲ್ಲಿ ಮರಳು ಗಣಿಗಾರಿಕೆ ಎಷ್ಟು ಸಲ ಬಂದ್ ಮಾಡಲಾಗಿತ್ತು? ಮತ್ತು ಮರಳಿನ ಬೆಲೆ ಬರಾಸ್‌ಗೆ ಏಷ್ಟಿತ್ತು ಅನ್ನುವುದನ್ನು ಕಾಂಗ್ರೆಸ್ ಮುಖಂಡರು ಹಾಗೂ ಸಚಿವರು ನೆನಪು ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
2018 ರಿಂದ 2023 ರ ಅವಧಿಯಲ್ಲಿ ನಾನೇ ಶಾಸಕನಾಗಿದ್ದಾಗ ರೇತಿ ಬರಾಸ್‌ಗೆ ಹೇಗೆ ಸಿಗುತ್ತಿತ್ತು ಅನ್ನುವುದನ್ನು ಜನ ಇವತ್ತೂ ಕೂಡ ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ಮಾತನಾಡಿಕೊಳ್ಳುತ್ತಿದ್ದಾರೆ ಮತ್ತು ಆ ಸಂದರ್ಭದಲ್ಲಿ ಹೈಕೋರ್ಟನಲ್ಲಿಯೂ, ಅದಲ್ಲದೆ ದಕ್ಷಿಣ ಕನ್ನಡದ ಮರಳು ಗಣಿಗಾರಿಕೆ ನಡೆಸುವವರು, ಹಸಿರು ಪೀಠಕ್ಕೆ ಹೋಗಿದ್ದರೂ ಜನರಿಗೆ ಅತೀ ಕಡಿಮೆ ಬೆಲೆಗೆ ಸರಾಗವಾಗಿ ಮರಳು ಸಿಗುವಂತೆ ಮಾಡಿದ್ದೆ ಎಂದರು.. ಈಗ ಮಂಕಾಳ್ ವೈದ್ಯರು ಕೇವಲ ಶಾಸಕರಲ್ಲ ಮಂತ್ರಿಗಳು ಮತ್ತೆ ಜಿಲ್ಲಾ ಉಸ್ತುವಾರಿ ಸಚಿವರು. ಕಳ್ಳನಿಗೊಂದು ಪಿಳ್ಳೆ ನೆವ ಎನ್ನುವಂತೆ ಇವತ್ತಿನ ತಮ್ಮಸ್ವ ಹಿತಾಸಕ್ತ ಕಾಪಾಡುವುದಕ್ಕೋಸ್ಕರವಾಗಿ ಕಳೆದ 6 ತಿಂಗಳಿನಿಂದ ಮರಳು – ಗಣಿಗಾರಿಕೆಯನ್ನು ಬೇರೆ ಬೇರೆ ಪ್ರಭಾವ ಬಳಸಿ ಸ್ಥಗಿತಗೊಳಿಸಿರುವುದಲ್ಲದೆ, ವಿನಾಕಾರಣ ಸಮಸ್ಯೆಯನ್ನು ಕ್ಷೇತ್ರದಲ್ಲಿ ಜೀವಂತವಿರಿಸಿ ಸಾವಿರಾರು ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುವ ಪರಿಸ್ಥಿತಿ ತಂದಿಟ್ಟಿರುವುದು ಯಾರು ಎನ್ನುವ ಆತ್ಮ ವಿಮರ್ಶೆ ಮಾಡಿಕೊಂಡರೆ ಒಳ್ಳೆಯದು ಎಂದು ತಿಳಿಸಿದರು.
ಶಾಸಕರ ಕೈಯಲ್ಲಿ ಆಗದೇ ಇರುವುದು ಏನು ಅನ್ನುವುದನ್ನು ತಾವು ಮಾಜಿಯಾಗಿದ್ದಾಗ ಕೇಳಿರುವುದು ಒಮ್ಮೆ ನೆನಪು ಮಾಡಿಕೊಂಡರೆ ಒಳಿತು, ಇವತ್ತು ತಾವು ಉಸ್ತುವಾರಿ ಸಚಿವರಿದ್ದೀರಿ ನಿಮ್ಮ ಕೈಯಲ್ಲಿ ಆಗದಿರುವುದು ಏನು ಎನ್ನುವುದನ್ನು ಪ್ರಶ್ನೆ ಮಾಡಿಕೊಳ್ಳಿ ಎಂದರು.ಒಂದೊಮ್ಮೆ ರಾಜಕಾರಣ ಮಾಡುವುದೇ ತಮ್ಮ ತೆವಲಾದರೆ ಸಮಸ್ಯೆಯನ್ನು ಬಗೆಹರಿಸಿ ಬೇರೆಯವರ ಮೇಲೆ ಗೂಬೆ ಕೂರಿಸುವುದನ್ನು ನಿಲ್ಲಿಸಿ ಪ್ರಾಮಾಣಿಕವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆಗೆ ಇತಿಶ್ರೀ ಹಾಡಿ. ಅದು ಸಾಧ್ಯವಾಗದೇ ಹೋದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಗೌರವ ಕಾಪಾಡಿಕೊಳ್ಳಿ. ಕ್ಷೇತ್ರದ ಸಮಸ್ಯೆ ಬಗೆಹರಿಸಲು ನಾವು ಸಿದ್ಧರಿದ್ದೇವೆ ಎಂದು ಗುಡುಗಿದರು. ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಭಟ್ಕಳ ಮಂಡಲದ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಬಿಜೆಪಿ ಮುಖಂಡರಾದ ಗೋವಿಂದ ನಾಯ್ಕ ಹನುಮಾನ ನಗರ, ಶ್ರೀಕಾಂತ್ ನಾಯ್ಕ ಆಸರಕೇರಿ, ಸುಬ್ರಾಯ ದೇವಡಿಗ ಮುಂತಾದವರು ಉಪಸ್ಥಿತರಿದ್ದರು.