ಅಂಕೋಲಾ : ಅಧಿಕಾರ ದುರ್ಬಳಕೆ ಹಾಗೂ ಇನ್ನಿತರ ಕಾರಣದಿಂದ ಇಲ್ಲಿಯ ಪುರಸಭೆ ಮುಖ್ಯಾಧಿಕಾರಿ ಹಾಗೂ ಕಿರಿಯ ಅಭಿಯಂತರರನ್ನು ಪೌರಾಡಳಿತ ನಿರ್ದೇಶನಾಲಯದ ಶಿಸ್ತು ಪ್ರಾಧಿಕಾರಿ ಹಾಗೂ ನಿರ್ದೇಶಕರಾದ ಪ್ರಭುಲಿಂಗ್ ಕವಳಿಕಟ್ಟಿ ಅವರು
ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅಂಕೋಲಾ ಪುರಸಭೆಯ ಮುಖ್ಯಾಧಿಕಾರಿ ಎಚ್ ಅಕ್ಷತಾ ಹಾಗೂ ಕಿರಿಯ ಅಭಿಯಂತರ ಶಲ್ಜಾ ನಾಯ್ಕರವರು ಅಧಿಕಾರ ದುರ್ಬಳಕೆ ಹಾಗೂ ಆಡಳಿತ ಮಂಡಳಿಯ ಒಪ್ಪಿಗೆ ಪಡೆಯದೆ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದನ್ನು ಗಮನಿಸಿದ ಪುರಸಭೆ ಅಧ್ಯಕ್ಷ ಸೂರಜ್ ನಾಯ್ಕ ಹಾಗೂ 19 ಸದಸ್ಯರು ಜಿಲ್ಲಾಧಿಕಾರಿ ಹಾಗೂ ಯೋಜನಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಈ ದೂರಿನ ಹಿನ್ನೆಲೆ ತನಿಖೆ ಆರಂಭಿಸಿದ ಅವರು ಮುಖ್ಯಾಧಿಕಾರಿ ಹಾಗೂ ಕಿರಿಯ ಅಭಿಯಂತರರಿಗೆ ಈ ಕುರಿತು ಉತ್ತರ ನೀಡುವಂತೆ ನೋಟಿಸ್ ನೀಡಿದ್ದರು, ಅವರು ನೀಡಿದ ಉತ್ತರ ಸಮಂಜಸವಲ್ಲದೆ ಇರುವುದರಿಂದ ಪ್ರಾಥಮಿಕ ತನಿಖೆಯಲ್ಲಿ ಲೋಪ ಎಸಗಿರುವ ಬಗ್ಗೆ ಸಾಭೀತಾದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಪೌರಾಡಳಿತ ಇಲಾಖೆಗೆ ಪತ್ರ ಬರೆದಿದ್ದು, ಸೋಮವಾರ ಇಬ್ಬರು ಅಧಿಕಾರಿಗಳನ್ನು ಅಮಾನತ್ತು ಮಾಡಿದ ಪೌರಾಡಳಿತ ನಿರ್ದೇಶನಾಲಯದ ಶಿಸ್ತು ಪ್ರಾಧಿಕಾರಿ ಹಾಗೂ ನಿರ್ದೇಶಕರಾದ ಪ್ರಭುಲಿಂಗ್ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.
ಆದೇಶದಲ್ಲಿ ಏನಿದೆ?
ಪುಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ಪ್ರಭುಲಿಂಗ ಕವಳಿಕಟ್ಟಿ, ಭಾ.ಆ.ಸೇ., ಶಿಸ್ತು, ಪ್ರಾಧಿಕಾರಿ ಹಾಗೂ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು ಆದ ನಾನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 9(2)(ಸಿ)ರಂತೆ ನನಗೆ ಪ್ರದತ್ತವಾದ ಅಧಿಕಾರದನ್ವಯ, ಹೆಚ್.ಅಕ್ಷತಾ, ಮುಖ್ಯಾಧಿಕಾರಿ, ಪುರಸಭೆ ಅಂಕೋಲಾ ರವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 10 ರಡಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ, ಸದರಿಯವರ ಲೀನ್ (ಸ್ಥಾನ) ಅನ್ನು ವಿಜಯಪುರ ಜಿಲ್ಲೆಯ ಕೋಲಾರ ಪಟ್ಟಣ ಪಂಚಾಯಿತಿಯಲ್ಲಿ ಖಾಲಿ ಇರುವ ಮುಖ್ಯಾಧಿಕಾರಿ ಶ್ರೇಣಿ-2ರ ಹುದ್ದೆಗೆ ಬದಲಿಸಿ ಆದೇಶಿಸಿದೆ.
ಕರ್ತವ್ಯ ನಿರ್ಲಕ್ಷತೆ ತೋರಿರುವ ಶೈಲಜಾ ಎಸ್ ನಾಯಕ, ಕಿರಿಯ ಅಭಿಯಂತರರು ಪುರಸಭೆ ಅಂಕೋಲಾ ರವರನ್ನು ಸೇವೆಯಿಂದ ಅಮಾನತ್ತಿನಲ್ಲಿರಿಸಿ, ಲೀನ್‌ನ್ನು ಪ್ರಸ್ತುತ ಕಾರ್ಯ ನಿರ್ವಹಣೆ ಮಾಡುತ್ತಿರುವ ಸ್ಥಳದಿಂದ ಬೇರೆಡೆಗೆ ಬದಲಾವಣೆ ಮಾಡುವ ಕುರಿತು ಈ ಕೆಳಕಂಡ ಆದೇಶ. ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ಪ್ರಭುಲಿಂಗ ಕವಳಿಕಟ್ಟಿ, ಭಾ.ಆ.ಸೇ., ಶಿಸ್ತು ಪ್ರಾಧಿಕಾರಿ ಹಾಗೂ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು ಆದ ನಾನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 9(2)(ಸಿ)ರಂತೆ ನನಗೆ ಪ್ರದತ್ತವಾದ ಅಧಿಕಾರದನ್ವಯ, ಶ್ರೀಮತಿ ಶೈಲಜಾ ಎಸ್ ನಾಯಕ, ಕಿರಿಯ ಅಭಿಯಂತರರು, ಪುರಸಭೆ ಅಂಕೋಲಾ ರವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 10 ರಡಿ ರಂತೆ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ, ಸದರಿಯವರ ಲೀನ್ (ಸ್ನಾನ) ಅನ್ನು ಗದಗ ಜಿಲ್ಲೆಯ ಗಜೇಂದ್ರಗಡ ಪುರಸಭೆಯಲ್ಲಿ ಖಾಲಿ ಇರುವ ಕಿರಿಯ ಅಭಿಯಂತರರ ಹುದ್ದೆಗೆ ಬದಲಿಸಿ ಆದೇಶಿಸಿದೆ.
ಅಮಾನತ್ತಿನ ಅವಧಿಯಲ್ಲಿ ಪೂರ್ವಾನುಮತಿ ಇಲ್ಲದೆ ಕೇಂದ್ರಸ್ಥಾನವನ್ನು ಬಿಡತಕ್ಕದಲ್ಲ ಮತ್ತು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 98 ರನ್ವಯ ಜೀವನಾಧಾರ ಭತ್ಯೆಗೆ ಅರ್ಹರಿರುತ್ತಾರೆ ಎಂದು ಆದೇಶ ಪ್ರತಿಯಲ್ಲಿ ತಿಳಿಸಲಾಗಿದೆ.