ಶಿರಸಿ ಪ್ರದೇಶದಲ್ಲಿ ಹಲವು ವರ್ಷಗಳಿಂದ ಜನಹಿತದ ಹೋರಾಟಗಳನ್ನು ಮುನ್ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಇತ್ತೀಚೆಗೆ ನಿಶ್ಶಬ್ದರಾಗಿರುವುದು ಜನರ ಗಮನ ಸೆಳೆಯುತ್ತಿದೆ.
ಸುಸಜ್ಜಿತ ಆಸ್ಪತ್ರೆ ನಿರ್ಮಾಣ, ಡಕೋಟಾ ಬಸ್ಸುಗಳ ನಿರ್ವಹಣೆ, ರಸ್ತೆಗಳ ದುಸ್ಥಿತಿ, ಪ್ರವಾಹಪೀಡಿತ ಪ್ರದೇಶದ ಸಮಸ್ಯೆ, ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿ ಮುಂತಾದ ವಿಷಯಗಳಲ್ಲಿ ಹಲವು ಬಾರಿ ಹೋರಾಟ ನಡೆಸಿದ ಹೆಗಡೆ ಅವರು ಕಳೆದ ಎರಡು ತಿಂಗಳಿನಿಂದ ಯಾವುದೇ ಚಟುವಟಿಕೆಯಲ್ಲಿ ಕಾಣಿಸಿಕೊಳ್ಳದಿರುವುದು ಕುತೂಹಲ ಮೂಡಿಸಿದೆ.

ಹಿಂದಿನ ದಿನಗಳಲ್ಲಿ ಅವರು ಹೈಟೆಕ್ ಆಸ್ಪತ್ರೆ ನಿರ್ಮಾಣದ ಅಗತ್ಯತೆಯ ಕುರಿತು ಪಾದಯಾತ್ರೆ ನಡೆಸಿದ್ದರು. ಪ್ರತ್ಯೇಕ ಜಿಲ್ಲೆ ಬೇಡಿಕೆಗೆ ಪ್ರತಿ ತಾಲೂಕಿನಲ್ಲಿ ಸಭೆಗಳನ್ನು ಆಯೋಜಿಸಿದ್ದರು. ರಸ್ತೆಗಳ ಗುಂಡಿಗಳು, ಅಸಮರ್ಪಕ ಕಾಮಗಾರಿ, ಮತ್ತು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಅವರು ಪದೇ ಪದೇ ಕಿಡಿಕಾರಿದ್ದರು. ಆದರೆ, ಸೆಪ್ಟೆಂಬರ್ 22ರಂದು ಶಿರಸಿ ಆಸ್ಪತ್ರೆ ಕುರಿತು ಎಚ್ಚರಿಕೆ ನೀಡಿದ ಬಳಿಕ, ಹೋರಾಟ ಶುರುವಾಗದೆ ಮೌನವಾಗಿರುವುದು ಅವರ ಅನುಯಾಯಿಗಳಲ್ಲಿ ಪ್ರಶ್ನೆ ಹುಟ್ಟಿಸಿದೆ.
ಅನಂತಮೂರ್ತಿ ಹೆಗಡೆ ಅವರು ಹಿಂದೆ ಬಜೆಪಿ ಪಕ್ಷದ ನಾಯಕರನ್ನೂ ನೇರವಾಗಿ ಟೀಕಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ, ಹಾಗೂ ಶಿವರಾಮ ಹೆಬ್ಬಾರ್ ಅವರ ವಿರುದ್ಧವೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.ಜಿಲ್ಲಾ ವಿಭಜನೆ ಕುರಿತ ಅವರ ಹೇಳಿಕೆ ಒಂದು ವೇಳೆ ಕನ್ನಡ ಸಂಘಟನೆಯ ನಾಯಕರ ಅಸಮಾಧಾನಕ್ಕೂ ಕಾರಣವಾಗಿತ್ತು.
ಮೂರು ವರ್ಷಗಳಿಂದ ಶಿರಸಿ–ಸಿದ್ದಾಪುರ ಪ್ರದೇಶದಲ್ಲಿ ಜನರ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ಹೋರಾಟ ನಡೆಸುತ್ತಿದ್ದ ಹೆಗಡೆ ಅವರು ಇದೀಗ ಸಾರ್ವಜನಿಕ ಬದುಕಿನಿಂದ ಹಿಂದೆ ಸರಿದಂತಿದ್ದಾರೆ. ಕೆಲವರು ಇದನ್ನು ರಾಜಕೀಯ ಒತ್ತಡದ ಪರಿಣಾಮ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಅವರ ವೈಯಕ್ತಿಕ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಹೋರಾಟಕ್ಕೆ ವಿರಾಮ ನೀಡಿದ್ದಾರೆ ಎಂದು ವಿಶ್ಲೇಷಿಸುತ್ತಿದ್ದಾರೆ.
ಅನಂತಮೂರ್ತಿ ಹೆಗಡೆ ಅವರು ‘ವಿಶ್ವಂಭರ’ ಹೆಸರಿನ ವಾರಪತ್ರಿಕೆ ನಡೆಸುತ್ತಿರುವುದರ ಜೊತೆ ರಿಯಲ್ ಎಸ್ಟೇಟ್ ಹಾಗೂ ಚಿತ್ರ ನಿರ್ಮಾಣ ಕ್ಷೇತ್ರದಲ್ಲಿಯೂ ತೊಡಗಿಕೊಂಡಿದ್ದಾರೆ. ಆದಾಯದ ಒಂದು ಭಾಗವನ್ನು ಅವರು ಸಮಾಜ ಸೇವೆಗೆ ಮೀಸಲಿಟ್ಟಿದ್ದಾರೆ.
ಹೋರಾಟಗಳಿಂದ ಜನರ ಹೃದಯ ಗೆದ್ದಿದ್ದ ಈ ಹೋರಾಟಗಾರ ಈಗ ನಿಶ್ಶಬ್ದರಾಗಿರುವುದು “ಮತ್ತೆ ಯಾವಾಗ ಚಟುವಟಿಕೆಗೆ ಇಳಿಯುತ್ತಾರೆ?” ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ.

