ಕಾರವಾರ- ಕಾರವಾರ ತಾಲೂಕಿನ ಕಾಜುಬಾಗದಲ್ಲಿರುವ ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯ ಪ್ರೀತಿಪಾತ್ರ ಶಿಕ್ಷಕಿ ರೀಜಾ ಫ್ರೆಂಡ್ಲಿ ಪುಡ್ತಾಡೊ (58) ಅವರು ಅನಾರೋಗ್ಯದ ನಂತರ ಇಹಲೋಕ ತ್ಯಜಿಸಿದ್ದಾರೆ.

ಅವರು ತಮ್ಮ ಶಿಕ್ಷಕ ಜೀವನದ ಒಂದು ದಶಕವನ್ನು ಅಂಕೋಲಾದ ನಿರ್ಮಲ ಹೃದಯ ಕಾನ್ವೆಂಟ್ ಶಾಲೆಯಲ್ಲಿ ಕಳೆದಿದ್ದು, ಅಲ್ಲಿ ಚಿಕ್ಕ ಮಕ್ಕಳೊಂದಿಗೆ ಮಕ್ಕಳಂತೆ ಬೆರೆತು, ಪಾಠದೊಂದಿಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಪ್ರೀತಿಯ ವಾತಾವರಣ ನಿರ್ಮಿಸಿದ್ದರು.
ಅಧ್ಯಯನದಲ್ಲಿ ಹಿಂದುಳಿದ ಮಕ್ಕಳಿಗಾಗಿ ವಿಶೇಷ ಪಾಠಯೋಜನೆ ರೂಪಿಸಿ ಅವರ ಪ್ರಗತಿಗೆ ಶ್ರಮಿಸಿದ ರೀಜಾ ಅಮ್ಮ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಕಾರ ನೀಡುತ್ತ, ಅನೇಕ ಕುಟುಂಬಗಳಿಗೆ ಆಶಾಕಿರಣವಾಗಿದ್ದರು.
ರೀಜಾ ಪುಡ್ತಾಡೊ ಅವರು ತಮ್ಮ ಪತಿ ಹಾಗೂ ಇಬ್ಬರು ಪುತ್ರರನ್ನು ಬಿಟ್ಟು ಅಗಲಿದ್ದಾರೆ. ಅವರ ಅಂತಿಮ ಸಂಸ್ಕಾರ ನವೆಂಬರ್ 1, ಶನಿವಾರ, ಮಧ್ಯಾಹ್ನ 3:30ಕ್ಕೆ ಕಾರವಾರದ ಕೆಥಡ್ರಲ್ ಚರ್ಚ್‌ನಲ್ಲಿ ನಡೆಯಲಿದೆ.
ಅವರ ನಿಧನದಿಂದ ಶಿಕ್ಷಕ ಸಮುದಾಯ ಹಾಗೂ ವಿದ್ಯಾರ್ಥಿಗಳು ಆಳವಾದ ದುಃಖ ವ್ಯಕ್ತಪಡಿಸಿದ್ದಾರೆ.

