ಬೆಂಗಳೂರು: ಮಗಳ ಅಕಾಲಿಕ ಸಾವಿನ ನೋವಿನಲ್ಲಿದ್ದ ತಂದೆಯು ಶವಪರೀಕ್ಷೆ ಮಾಡಿಸಲು ಲಂಚ ಕೇಳಿದ ಅಧಿಕಾರಿಗಳ ವರ್ತನೆಯಿಂದ ಮತ್ತೊಮ್ಮೆ ತತ್ತರಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಮಿದುಳು ರಕ್ತಸ್ರಾವದಿಂದ ಮೃತಪಟ್ಟ ಯುವತಿ ಅಕ್ಷಯ ಅವರ ಶವಪರೀಕ್ಷೆ ವೇಳೆ ಅನೈತಿಕ ಹಣದ ಬೇಡಿಕೆ ನಡೆದಿರುವುದಾಗಿ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತಳ ತಂದೆ ಶಿವಕುಮಾರ್ (64) ಅವರು ನಿವೃತ್ತ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನ ಸಿಎಫ್‌ಒ ಆಗಿದ್ದರು. ಅವರು ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಅನುಭವಿಸಿದ ಅಸಹಾಯಕತೆ ಹಂಚಿಕೊಂಡಿದ್ದಾರೆ.
ಮಗಳ ಸಾವಿನ ವಿಚಾರ ತಿಳಿದ ನಂತರ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದ ಶಿವಕುಮಾರ್ ದಂಪತಿ, ಅಂಬುಲೆನ್ಸ್ ಚಾಲಕರಿಂದ ಪ್ರಾರಂಭಿಸಿ ಶವಪರೀಕ್ಷೆ ಹಾಗೂ ಠಾಣೆ ಮಟ್ಟದ ಪ್ರಕ್ರಿಯೆಗಳಲ್ಲಿ ಹಣ ಬೇಡಿಕೆಯಾದ ಬಗ್ಗೆ ಹೇಳಿಕೊಂಡಿದ್ದಾರೆ. ಅಂಬುಲೆನ್ಸ್ ಶುಲ್ಕಕ್ಕಿಂತ ಹೆಚ್ಚುವರಿ ₹2,000, ಠಾಣೆಯಲ್ಲಿ UDR ಕಾಪಿ ಪಡೆಯಲು ₹5,000 ಹಾಗೂ ನಂತರ ಪ್ರಮಾಣ ಪತ್ರಕ್ಕಾಗಿ ₹2,000 ಪಾವತಿಸಿದ್ದಾಗಿ ಅವರು ಬರೆದಿದ್ದಾರೆ.
“ನನ್ನಲ್ಲಿ ಹಣವಿತ್ತು, ಆದ್ದರಿಂದ ಪಾವತಿಸಿದೆ. ಆದರೆ ಬಡವರು ಇಂಥ ಸಂದರ್ಭದಲ್ಲೇನು ಮಾಡುತ್ತಾರೆ?” ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ. ಅವರು ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಕೆಲ ಗಂಟೆಗಳಲ್ಲಿ ಪೋಸ್ಟ್ ಅಳಿಸಿದರೂ, ವಿಷಯ ಈಗ ಸಾಮಾಜಿಕವಾಗಿ ಚರ್ಚೆಗೆ ಗ್ರಾಸವಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಹಣ ವಸೂಲಿ ನಡೆದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಸಂಬಂಧಿತ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಹಾಗೂ ಕಾನ್ಸ್‌ಟೇಬಲ್ ಗೋರಕ್ ನಾಥ್ ಅವರನ್ನು ಅಮಾನತು ಮಾಡುವಂತೆ ವೈಟ್‌ಫೀಲ್ಡ್ ಡಿಸಿಪಿ ಪರಶುರಾಮ್ ಆದೇಶ ಹೊರಡಿಸಿದ್ದಾರೆ.
