ಭಟ್ಕಳ, ನ.7: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾಕರಸಾಸಂ) ಪ್ರಕಟಿಸಿರುವ 2022–23ನೇ ಸಾಲಿನ ‘ಸುರಕ್ಷಾ ಚಾಲಕ’ ಪ್ರಶಸ್ತಿಗೆ ಭಟ್ಕಳ ಡಿಪೋದಲ್ಲಿನ ಹಿರಿಯ ಚಾಲಕ ರಾಮಚಂದ್ರ ಎಲ್. ನಾಯ್ಕ ಆಯ್ಕೆಯಾಗಿದ್ದಾರೆ.

ಭಟ್ಕಳ ತಾಲ್ಲೂಕಿನ ತಲಾನ ಕಸಲಗದ್ದೆ ಮೂಲದ ರಾಮಚಂದ್ರ ನಾಯ್ಕ ಅವರು ಕಳೆದ ಐದು ವರ್ಷಗಳಿಂದ ಶಿರಸಿ ಘಟಕದ ಭಟ್ಕಳ ಡಿಪೋದಲ್ಲಿ ಯಾವುದೇ ಅಪಘಾತವಿಲ್ಲದೆ ನಿರಂತರ ಮತ್ತು ಸುರಕ್ಷಿತ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಯಾಣಿಕರ ಜೀವದ ಭದ್ರತೆಯನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸುವ ಇವರ ಕಾರ್ಯಪದ್ಧತಿಯನ್ನು ಸಂಸ್ಥೆ ಮೆಚ್ಚಿಕೊಂಡು ಈ ಗೌರವ ನೀಡಿದೆ.
ಕಠಿಣ ಹವಾಮಾನ, ಮಳೆಗಾಲದ ರಾತ್ರಿ, ಅಸಮತೋಲನ ರಸ್ತೆಗಳು ಮತ್ತು ದಟ್ಟ ಸಂಚಾರದ ಮಧ್ಯೆಯೂ ಅವರು ಪ್ರದರ್ಶಿಸಿದ ಶಿಸ್ತುಬದ್ಧ ಚಾಲನೆ ಹಾಗೂ ಜವಾಬ್ದಾರಿತನವು ಇತರರಿಗೆ ಮಾದರಿಯಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭ ಹುಬ್ಬಳ್ಳಿ–ಧಾರವಾಡದಲ್ಲಿ ನಡೆಯಲಿದ್ದು, ಹೊಸ ಬಸ್ ನಿಲ್ದಾಣಗಳ ಉದ್ಘಾಟನೆಯ ಸಂದರ್ಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.
ರಾಮಚಂದ್ರ ನಾಯ್ಕರ ಈ ಸಾಧನೆ ಭಟ್ಕಳ ಡಿಪೋ ಮಾತ್ರವಲ್ಲದೆ ಇಡೀ ಉತ್ತರ ಕನ್ನಡ ಜಿಲ್ಲೆಯ ಸಾರಿಗೆ ಸಿಬ್ಬಂದಿಗೆ ಪ್ರೇರಣೆಯಾಗಿದೆ.

