ಹೊನ್ನಾವರ: ಪಶ್ಚಿಮ ಘಟ್ಟದ ಜೀವ ವೈವಿಧ್ಯ ಮತ್ತು ಹಸಿರು ವಾತಾವರಣದ ಸಂರಕ್ಷಣೆಗೆ ಕೇಂದ್ರ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ. ಕರ್ನಾಟಕದ ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆಗೆ ಕೇಂದ್ರ ಅರಣ್ಯ ಸಲಹಾ ಸಮಿತಿ (FCA) ಅನುಮೋದನೆ ನೀಡದೆ ತಡೆಗೋಡೆ ನಿರ್ಮಿಸಿದೆ ಎಂದು ವರದಿಯಾಗಿದೆ.
ರೂ. 10,240 ಕೋಟಿ ವೆಚ್ಚದ ಈ ಯೋಜನೆ ಶರಾವತಿ ಲಯನ್-ಟೈಲ್ಡ್ ಮಕಾಕ್ ವನ್ಯಜೀವಿ ಅಭಯಾರಣ್ಯ ಪ್ರದೇಶದೊಳಗೆ ಜಾರಿಗೊಳ್ಳಬೇಕಾಗಿತ್ತು. ಯೋಜನೆಯಿಂದ 54 ಹೆಕ್ಟೇರ್ ಅರಣ್ಯ ಪ್ರದೇಶ ಕಳೆದುಕೊಳ್ಳುವ ಸಾಧ್ಯತೆ ಜೊತೆಗೆ 15 ಸಾವಿರಕ್ಕೂ ಹೆಚ್ಚು ಮರಗಳ ಕಡಿತ, ಭೂಕುಸಿತ ಅಪಾಯ ಮತ್ತು ಜೀವವೈವಿಧ್ಯ ಹಾನಿಯ ಆತಂಕಗಳು ವ್ಯಕ್ತವಾಗಿದ್ದವು.
ರಾಜ್ಯ ವನ್ಯಜೀವಿ ಮಂಡಳಿಯು ಷರತ್ತುಬದ್ಧ ಅನುಮತಿ ನೀಡಿದ್ದರೂ, ಪರಿಸರವಾದಿಗಳು ಮತ್ತು ಸ್ಥಳೀಯ ನಾಗರಿಕರಿಂದ ಉಂಟಾದ ತೀವ್ರ ವಿರೋಧದ ಹಿನ್ನೆಲೆ ಕೇಂದ್ರ ಸರ್ಕಾರ ಅಂತಿಮವಾಗಿ ತಡೆ ನಿರ್ಧಾರ ತೆಗೆದುಕೊಂಡಿದೆ.
ಪರಿಸರ ಹೋರಾಟಗಾರರು ಈ ನಿರ್ಧಾರವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದು, “ಇದು ಪಶ್ಚಿಮ ಘಟ್ಟದ ಉಸಿರನ್ನು ಉಳಿಸಿದ ಮಹತ್ವದ ದಿನ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೀಗ ಕರ್ನಾಟಕ ಪವರ್ ಕಾರ್ಪೋರೇಶನ್ (KPCL) ಮುಂದಿನ ಹಂತದಲ್ಲಿ ಪುನರ್‌ಪರಿಶೀಲನೆಗೆ ಅರ್ಜಿ ಸಲ್ಲಿಸಬಹುದಾದರೂ, ಪ್ರಸ್ತುತ ಪರಿಸರ ಸ್ನೇಹಿ ಈ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

