ಅಂಕೋಲಾ:ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಅಂಕೋಲಾ ವಕೀಲರ ಸಂಘದ ಸಹಯೋಗದಲ್ಲಿ, ಪಟ್ಟಣದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ NALSA ಯೋಜನೆ – 2025ರ ಅಂಗವಾಗಿ “ಕಾನೂನು ಅರಿವು ಮತ್ತು ನೆರವು” ಕುರಿತು ವಿಶೇಷ ಕಾರ್ಯಕ್ರಮ ಶನಿವಾರ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ವಕೀಲ ಉಮೇಶ ನಾಯ್ಕ ಅವರು, “ವಿದ್ಯಾರ್ಥಿಗಳು ಕಾನೂನಿನ ಮೂಲಭೂತ ತಿಳುವಳಿಕೆ ಹೊಂದಿರುವುದು ಅತ್ಯಗತ್ಯ. ಭಾರತೀಯ ಕಾನೂನು ವ್ಯವಸ್ಥೆ ಸಮುದ್ರದಂತಿದೆ — ವಿಶಾಲವಾದದ್ದು, ಆದರೆ ಪ್ರತಿಯೊಬ್ಬರಿಗೂ ನ್ಯಾಯ ದೊರೆಯುವ ಮಾರ್ಗವನ್ನು ಕಲ್ಪಿಸುವ ಶಕ್ತಿ ಹೊಂದಿದೆ,” ಎಂದು ಹೇಳಿದರು.
ಅವರು ಮುಂದುವರಿದು, ಯುವಕರು ಕೆಲವೊಮ್ಮೆ ತಿಳಿಯದೆ ಅಪರಾಧಿಕ ಕೃತ್ಯಗಳಿಗೆ ಒಳಗಾಗುತ್ತಿರುವುದು ಕಾನೂನು ಅರಿವಿನ ಕೊರತೆಯಿಂದಾಗಿದೆಯೆಂದು ಉಲ್ಲೇಖಿಸಿದರು. “ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿವೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಉಂಟಾದರೆ ತಾಲೂಕು ಕಾನೂನು ಸೇವಾ ಸಮಿತಿ ಸದಾ ನೆರವಾಗುತ್ತದೆ,” ಎಂದರು.
ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕು ಅಧ್ಯಕ್ಷ ಹಾಗೂ ಉಪನ್ಯಾಸಕ ಮಾರುತಿ ಹರಿಕಂತ್ರ ಮಾತನಾಡಿ, “ಯುವ ಮನಸ್ಸಿನಲ್ಲಿ ಬದಲಾವಣೆ ಸಹಜ. ಆದರೆ ತಮ್ಮ ಸಾಮರ್ಥ್ಯವನ್ನು ಸಕಾರಾತ್ಮಕ ದಾರಿಯಲ್ಲಿ ಬಳಸುವುದು ಅಗತ್ಯ. ಪಾಲಕರ ಆಶಯಗಳನ್ನು ಗೌರವಿಸಿ, ಜವಾಬ್ದಾರಿಯುತ ನಡೆ ತಾಳಬೇಕು,” ಎಂದು ಸಲಹೆ ನೀಡಿದರು.
ವಸತಿ ನಿಲಯದ ವಾರ್ಡನ್ ಶಿವಾನಂದ ನಾಯ್ಕ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ, “ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಮತ್ತು ಕಾನೂನು ತಿಳುವಳಿಕೆ ಎರಡನ್ನೂ ಉತ್ತೇಜಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮಕ್ಕಳು ಉತ್ತಮ ಫಲಿತಾಂಶ ಸಾಧಿಸಿ ಉನ್ನತ ವಿದ್ಯಾಭ್ಯಾಸಕ್ಕೆ ಮುಂದಾಗಲಿ ಎಂಬುದು ನಮ್ಮ ಆಶಯ,” ಎಂದರು.
ಕಾರ್ಯಕ್ರಮದಲ್ಲಿ ಕಾನೂನು ಸೇವಾ ಸಮಿತಿಯ ಪ್ರಮೋದ ಗೌಡ, ವಸತಿ ನಿಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

