ಭಟ್ಕಳ- ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಅನೇಕ ಪ್ರದೇಶಗಳಲ್ಲಿ ನವೆಂಬರ್ 12ರಂದು ವಿದ್ಯುತ್ ಪೂರೈಕೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ನಿರ್ವಹಣಾ ಮತ್ತು ದುರಸ್ತಿ ಕಾಮಗಾರಿಗಳ ಹಿನ್ನೆಲೆಯಲ್ಲಿ ಕಾರವಾರ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳಲ್ಲಿ ವಿದ್ಯುತ್ ವ್ಯತ್ಯಯ ಸಂಭವಿಸಲಿದ್ದು, ಈ ಬಗ್ಗೆ ಹೆಸ್ಕಾಂ ಮಾಹಿತಿ ನೀಡಿದೆ.
ಕಾರವಾರ ಉಪವಿಭಾಗದಲ್ಲಿ ವಾಹಕ ಬದಲಾವಣೆ ಕಾಮಗಾರಿ ನಡೆಯುತ್ತಿರುವುದರಿಂದ ಬೈತಕೋಲ್ ಫೀಡರ್ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಬೆಳಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಕಡಿತ ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ದಿನ, ಕುಮಟಾ–ಹೊನ್ನಾವರ–ಮುರ್ಡೆಶ್ವರ ಉಪಕೇಂದ್ರಗಳಲ್ಲಿ 110 ಕೆವಿ ಬಸ್‌ಬಾರ್ ನಿರ್ವಹಣೆ ಕೈಗೊಳ್ಳಲಾಗುತ್ತಿರುವುದರಿಂದ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ. ಇದರಿಂದ ಈ ಮೂರು ತಾಲೂಕುಗಳ ಕೆಲವು ಭಾಗಗಳಲ್ಲಿ ಗ್ರಾಹಕರು ತಾತ್ಕಾಲಿಕ ಅಸೌಕರ್ಯ ಅನುಭವಿಸಬಹುದು.
ಕುಮಟಾ ಕೆಪಿಟಿಸಿಎಲ್ ಉಪಕೇಂದ್ರದ 11 ಕೆವಿ ಮಾರ್ಗಗಳಲ್ಲಿಯೂ ಕೇಬಲ್ ಬದಲಾವಣೆ ಹಾಗೂ ಹೊಸ ಮಾರ್ಗ ಅಳವಡಿಸುವ ಕಾಮಗಾರಿ ನಡೆಯಲಿದೆ. ಇದರ ಪರಿಣಾಮವಾಗಿ ಇಂಡಸ್ಟ್ರಿಯಲ್, ವಾಲ್ಗಳ್ಳಿ, ಮಿರ್ಜಾನ್ ಹಾಗೂ ಕತಗಾಲ ಮಾರ್ಗಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ.
ಹೆಸ್ಕಾಂ ಅಧಿಕಾರಿಗಳು ಸಾರ್ವಜನಿಕರಿಂದ ಈ ಅವಧಿಯಲ್ಲಿ ಸಹಕಾರ ನೀಡುವಂತೆ ವಿನಂತಿಸಿದ್ದಾರೆ.

