
ಕಾರವಾರ-ಕಾರವಾರದ ಚಿನ್ನದ ಆಭರಣ ತಯಾರಕನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಜಿಲ್ಲೆಗಳ ಪೊಲೀಸ್ ಇಲಾಖೆಯಿಂದ ಗಂಭೀರ ಶಿಸ್ತಿನ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ಪಾತ್ರವಿದೆ ಎಂಬ ಪ್ರಾಥಮಿಕ ವರದಿ ಆಧಾರದ ಮೇಲೆ, ಹಾವೇರಿ ಜಿಲ್ಲೆಯ ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ PSI ಮಾಳಪ್ಪ ಚಿಪ್ಪಲಕಟ್ಟಿಯನ್ನು ಸೇವೆಯಿಂದ ವಜಾಗೊಳಿಸಲಾಗಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ನಗರ ಠಾಣೆಯ PSI ಪ್ರವೀಣಕುಮಾರ್ ಅವರನ್ನು ಅಮಾನತು ಮಾಡಿ ಇಲಾಖಾ ತನಿಖೆಗೆ ಒಳಪಡಿಸಲಾಗಿದೆ.

ನವೆಂಬರ್ 24ರ ಬೆಳಗಿನ ಸಮಯದಲ್ಲಿ, ಈ ಇಬ್ಬರು PSIಗಳು ತಮ್ಮ ಪರಿಚಯ ವಲಯದ ಮೂವರು ವ್ಯಕ್ತಿಗಳನ್ನು ಕರೆದುಕೊಂಡು ಕಾರವಾರದ ಚಿನ್ನಾಭರಣ ತಯಾರಕ ವಿಶ್ವನಾಥ ಆರ್ಕಸಾಲಿ ಅವರ ಮೇಲೆ ದಾಳಿ ನಡೆಸಿದರೆಂದು ದೂರು ದಾಖಲಾಗಿದೆ. ಆರೋಪಿಗಳ ತಂಡವು ಆಟಿಕೆ ಗನ್ ಬಳಸಿ ವ್ಯಾಪಾರಿಯನ್ನು ಬೆದರಿಸಿ, 78.15 ಗ್ರಾಂ ಚಿನ್ನ ಮತ್ತು ತಯಾರಿಸಿದ ಚಿನ್ನಾಭರಣವನ್ನು ಕಸಿದುಕೊಂಡಿದ್ದರೆಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವುದಾಗಿ, ನಂತರ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು PSIಗಳನ್ನೂ ಬಂಧಿಸಲಾಗಿದೆ.

ಸಾರ್ವಜನಿಕರ ರಕ್ಷಣೆಗೆ ಹೊಣೆಗಾರರಾಗಿರುವ ಅಧಿಕಾರಿಗಳಿಂದ ಇಂತಹ ಗಂಭೀರ ಕೃತ್ಯ ನಡೆದಿದೆ ಎಂಬುದರಿಂದ, ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಯಿತು ಎಂದು ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.

