
ಕಾರವಾರ: ಅಂಕೋಲಾದ ಇನ್ಸ್ಪೆಕ್ಟರ್ ಚಂದ್ರಶೇಖರ ಮಠಪತಿ ಅವರು ಓಸಿ ಮಟ್ಕಾ ನಡೆಸುವವರಿಂದ ಹಣ ಪಡೆದು ಬೆಂಬಲ ನೀಡುತ್ತಿದ್ದಾರೆ ಎಂದು ಅಂಕೋಲಾ ಪುರಸಭೆಯ ಮಾಜಿ ಸದಸ್ಯ ಸಂದೀಪ ಭಂಟ್ ಆರೋಪಿಸಿದರು.

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,
ಅಂಕೋಲಾದ ಮಂಜುನಾಥ ನಾಯ್ಕ, ನಾರಾಯಣ ನಾಯ್ಕ ಎನ್ನುವವರು ಓಸಿ, ಮಟ್ಕಾ ನಡೆಸುತ್ತಿದ್ದಾರೆ. ಇದಕ್ಕೆ ಇನ್ಸ್ಪೆಕ್ಟರ್ ಚಂದ್ರಶೇಖರ ಮಠಪತಿ ಅವರು ಬೆಂಬಲ ನೀಡುತ್ತಿದ್ದಾರೆ. ಒಮ್ಮೆ ನನ್ನ ಬಳಿಯೇ ಬಂದು ಓಸಿ ಮಟ್ಕಾ ಮಾಡಿಸಿ ಹಣ ಕೊಡುವಂತೆ ತಿಳಿಸಿದ್ದರು. ಇಡೀ ತಾಲೂಕಿನಲ್ಲಿ ತಿಂಗಳಿಗೆ ಸುಮಾರು 6 ಲಕ್ಷ ರೂ. ಹಣವನ್ನು ಬುಕ್ಕಿಗಳಿಂದ ಪಡೆಯುತ್ತಿದ್ದಾರೆ. ಓಸಿ, ಮಟ್ಕಾ ದಂದೆ ನಡೆಸುವವರು ರಾಜೋರೋಷವಾಗಿ ದಂದೆ ನಡೆಸಲು ಸಿಪಿಐ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.

ತಾಲೂಕಿನಲ್ಲಿ ಎಲ್ಲಾದರು ಓಸಿ ಮಟ್ಕಾ ಮಾಡುವವರನ್ನು ವಶಕ್ಕೆ ಪಡೆದರೆ ತನ್ನ ಹೆಸರನ್ನ ಹಾಕಿ ಪ್ರಕರಣ ದಾಖಲಿಸುತ್ತಾರೆ. ಇದರಿಂದ ತಾಲೂಕಿನಲ್ಲಿ ಪೊಲೀಸ್ ವ್ಯವಸ್ಥೆಯೇ ಹಾಳುಬಿದ್ದಿದೆ. ಇನ್ಸ್ಪೆಕ್ಟರ್ ಚಂದ್ರಶೇಖರ ಮಠಪತಿ ಅವರ ವಿರುದ್ಧ ತಾನು ಮಾಡಿರುವ ಆರೋಪ ಸತ್ಯವಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅವರು ಈ ಬಗ್ಗೆ ತನಿಖೆ ನಡೆಸಿದರೆ ಸತ್ಯ ಹೇಳಲು ಸಿದ್ಧನಿದ್ದೇನೆ ಎಂದರು.


