ಶಿರಸಿ: ಸೊರಬ ಬನವಾಸಿ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಹಾರ್ಡವೇರ್ ಅಂಗಡಿ ಮಾಲಕ ಓಂ ಸಿಂಗ್ ಸಾವನಪ್ಪಿದ್ದಾರೆ.
ಬನವಾಸಿ ರಸ್ತೆಯ ಕಪ್ಪಗೇರಿ ಬಳಿಯ ದೇವಾಲಯ ತಿರುವಿನಲ್ಲಿ ಭಾನುವಾರ ಬೆಳಗ್ಗೆ 7.30ಕ್ಕೆ ಈ ಅಪಘಾತ ನಡೆದಿದ್ದು, ಕಾರಿನಲ್ಲಿ ಸಿಲುಕಿದ್ದ ಓಂ ಸಿಂಗ್ ಅವರನ್ನು ಬದುಕಿಸಲು ಅಲ್ಲಿನ ಗುತ್ಯಪ್ಪ ಮಾದರ್ ಸಾಕಷ್ಟು ಪ್ರಯತ್ನಿಸಿದರು. ಆದರೂ, ಪ್ರಯೋಜನವಾಗಲಿಲ್ಲ.
ಓಂ ಸಿಂಗ್ ಅವರು ರಾಜಸ್ಥಾನ ಮೂಲದವರು. ಬನವಾಸಿ ಬಳಿ ವಾಸವಾಗಿದ್ದರು. ಭಾನುವಾರ ಬೆಳಗ್ಗೆ ತಮ್ಮ ಇಕೋ ಕಾರಿನಲ್ಲಿ ಅವರು ಬನವಾಸಿಯಿಂದ ಸೊರಬಾ ಕಡೆ ಹೋಗುತ್ತಿದ್ದರು. ಎದುರಿನಿಂದ ಕೆಎಸ್‌ಆರ್‌ಟಿಸಿ ಬಸ್ಸು ಓಡಿಸಿಕೊಂಡು ಬಂದ ಮುಂಡಗೋಡಿನ ನಾಗರಾಜ ಚಲುವಾದಿ ಅವರು ಇಕೋ ಕಾರಿಗೆ ಬಸ್ಸು ಗುದ್ದಿದರು.
ಬಸ್ಸು ಗುದ್ದಿದ ರಭಸಕ್ಕೆ ಓಂ ಸಿಂಗ್ ಅವರು ಇಕೋ ಕಾರಿನ ಒಳಗೆ ಅಪ್ಪಚ್ಚಿಯಾದರು. ಅವರ ಕಾಲು ಜಖಂ ಆದ ಕಾರಿನಲ್ಲಿ ಸಿಲುಕಿದ್ದು, ಅಲ್ಲಿ ಅವರು ಒದ್ದಾಡುತ್ತಿದ್ದರು. ಇದೇ ವೇಳೆಗೆ ಕಪ್ಪಗೇರಿಯ ಗುತ್ತಯ್ಯ ಮಾದರ್ ವಾಕಿಂಗ್ ಹೋಗಿದ್ದರು. ಒದ್ದಾಡುತ್ತಿದ್ದ ಓಂ ಸಿಂಗ್ ಅವರನ್ನು ಕಾರಿನಿಂದ ಹೊರಗೆ ಎಳೆದು 108ಗೆ ಫೋನ್ ಮಾಡಿದರು.
ಬಲಗಾಲಿಗೆ ಗಂಭೀರ ಗಾಯಗೊಂಡಿದ್ದ ಓಂ ಸಿಂಗ್ ಅವರನ್ನು ಗುತ್ತಯ್ಯ ಅವರು ಬನವಾಸಿ ಆರೋಗ್ಯ ಕೇಂದ್ರಕ್ಕೆ ಸಾಸಿದರು. ಆದರೆ, ದಾರಿ ಮದ್ಯೆಯೇ ಓಂ ಸಿಂಗ್ ಸಾವನಪ್ಪಿದರು. `ರಸ್ತೆ ತಿರುವಿನಲ್ಲಿಯೂ ಬಸ್ಸಿನ ವೇಗ ಕಡಿಮೆ ಮಾಡದಿರುವುದು ಈ ಅಪಘಾತಕ್ಕೆ ಕಾರಣ’ ಎಂದು ಗುತ್ತಯ್ಯ ಅವರು ಶಿರಸಿ ಡಿಪೋದ ಬಸ್ಸು ಚಾಲಕ ನಾಗರಾಜ ಚಲುವಾದಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.