ಅಂಕೋಲಾ: ತಾಲ್ಲೂಕು ಪುರಸಭೆಯ ಸುದ್ದಿಯೊಂದು ಈಗ ಸಂತೆಯಲ್ಲೂ ಭರ್ಜರಿ ಸದ್ದು ಮಾಡುತ್ತಿದೆ. ಸದಾ ಖಾರವಾಗಿ ವರ್ತಿಸುವ ಸದಸ್ಯನೊಬ್ಬ ಮುಖ್ಯಾಧಿಕಾರಿ ಕಚೇರಿ ಮತ್ತು ಪುರಸಭೆಯಲ್ಲಿ ಕಾರಸ್ಥಾನ ಮುಂದುವರೆಸಿದ್ದು ಈ ಬಗ್ಗೆ ಉಳಿದ ಸದಸ್ಯರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಂಕೋಲಾ ಪಟ್ಟಣದಲ್ಲಿ ಈ ಸದಸ್ಯನ ಅನುಚಿತ ವರ್ತನೆಯ ಬಗ್ಗೆ ನಾನಾ ಕತೆಗಳು ಸ್ವಾರಸ್ಯಕರ ರೀತಿಯಲ್ಲಿ ಹರಡುತ್ತಿದ್ದು ಹೌದಾ! ಎಂದು ಕೆಲವರು ಹುಬ್ಬೇರಿಸಿದರೆ ಪುರಸಭೆಗೆ ಕೆಲಸಕ್ಕೆ ತೆರಳಿದವರು ಹೀಗಾಗಿಯೇ ನಮ್ಮ ಕಡತ ವಿಲೇವಾರಿ ವಿಳಂಬವಾಗುತ್ತಿದೆ ಎಂದು ಅವಲೋತ್ತುಕೊಳ್ಳುತ್ತಿದ್ದಾರೆ.
ಈ ಹಿಂದೆ ಅಂಕೋಲಾ ಪುರಸಭೆ ಹಲವು ವಿವಾದಗಳಿಂದ ಹೆಸರು ಪಡೆದಿದ್ದು ಇತ್ತೀಚಿಗೆ ನೂತನ ಆಡಳಿತ ಮಂಡಳಿ ರಚನೆಯಾಗಿ ಹಾಗೆಯೇ ಹೊಸ ಮುಖ್ಯಾಧಿಕಾರಿ ನೇಮಕವಾದ ನಂತರ ಪಾರದರ್ಶಕತೆಗೆ ಆದ್ಯತೆ ನೀಡಿ ಹೊಸ ಭರವಸೆ ಮೂಡಿತ್ತು. ಈ ನಡುವೆ ಇಲ್ಲಿ ಕಾರ್ಯ ನಿರ್ವಹಿಸಿದ ಮೂವರು ಅಧಿಕಾರಿಗಳು ವಿವಿದೆಡೆ ಲೋಕಾಯುಕ್ತರ ದಾಳಿಗೆ ಸಿಲುಕುವ ಮೂಲಕ ಈಗ ಕರ್ತವ್ಯ ನಿರತರಿಗೆ ಎಚ್ಚರಿಕೆಯ ಸಂದೇಶ ಮುಟ್ಟಿತ್ತು. ಪುರಸಭೆಯ ಆಡಳಿತ ರೈಲು ಹಳಿಯಲ್ಲಿ ಚಲಾವಣೆ ಆಗುತ್ತದೆ ಎಂದು ಭಾವಿಸಿದ ಜನರಿಗೆ ಸದಸ್ಯ ಮಹಾಶಯನೊಬ್ಬ ಇದು ಹಳಿ ಸೇರದ ರೈಲು ಎಂದು ಎಂಬುವುದನ್ನು ನಿರೂಪಿಸಲು ಹೊರಟಂತಿದೆ.
ಮುಖ್ಯಾಧಿಕಾರಿಗಳು ಹಿಂದಿನ ಅಧಿಕಾರಿಗಳು ಈ ಸದಸ್ಯನ ಮಾತು ಕೇಳಿ ಹಳ್ಳಕ್ಕೆ ಬಿದ್ದದ್ದು ಮರೆತು ಅಜಾಗರೂಕತೆಯ ನಡೆಯಿಟ್ಟರೆ? ಎಂಬುದು ಸಾರ್ವಜನಿಕರ ಪ್ರಶ್ನೆ. ಏಕೆಂದರೆ ಅಧಿಕಾರಿಗಳ ಕೊಠಡಿ ಇಲ್ಲವೇ ಸಿಬ್ಬಂದಿಗಳ ಟೇಬಲ್ ಈ ಸದಸ್ಯನ ಖಾಯಂ ಕಾರುಬಾರಿಯ ಸ್ಥಳವಾಗಿದೆ. ಇ- ಸ್ವತ್ತು ವ್ಯವಹಾರ, ಕಟ್ಟಡ ಪರವಾನಗಿ, ಬೀದಿ ಬದಿ ಅಂಗಡಿಗಳ ಕಡತಗಳ ಮೇಲೆ ಈ ಸದಸ್ಯ ಕೈಯಾಡಿಸಿದರೆ ಮಾತ್ರ ಅಧಿಕಾರಿ ಮತ್ತು ಸಿಬ್ಬಂದಿ ವಿಲೇವಾರಿ ಮಾಡುತ್ತಾರೆ. ದಿನಪೂರ್ತಿ ಈ ಸದಸ್ಯರನ್ನು ಮುಂದೆಯೇ ಕುಳಿಸಿ ಕೆಲಸ ಮಾಡಿದರೆ ಉಳಿದವರ ಸ್ಥಿತಿಯೇನು ಎನ್ನುವುದಾಗಿ ಉಳಿದ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇಷ್ಟಕ್ಕೆ ಸುಮ್ಮನಾಗದ ಸದಸ್ಯರು, ಅಧ್ಯಕರು ಮತ್ತು ಮುಖ್ಯಾಧಿಕಾರಿ ಈ ಸದಸ್ಯನ ಅನವಶ್ಯಕ ಹಸ್ತಕ್ಷೇಪ ಸಿಬ್ಬಂದಿಯೊಂದಿಗೆ ಸಲುಗೆಯನ್ನು ನಿಯಂತ್ರಿಸದಿದ್ದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತೇವೆ. ಅವರು ಸಿಸಿಟಿವಿ ದೃಶ್ಯಾವಳಿ ನೋಡಿಯೇ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ
ಶಾಸಕರು ಪುರಸಭೆಯ ಆಡಳಿತಕ್ಕೆ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ. ಆದರೆ ಈ ಸದಸ್ಯನ ವರ್ತನೆಯ ಕುರಿತು ನಾನಾ ರೀತಿಯ ಚರ್ಚೆಗಳು ಇರುವ ಕಾರಣ ಈತನನ್ನು ಅವರು ಬೆಂಬಲಿಸುವುದಿಲ್ಲ. ಈಗಿನ ವಿಚಿತ್ರ ವರ್ತನೆಯ ಬಗ್ಗೆ ಶಾಸಕರ ಗಮನಕ್ಕೆ ತರಲಾಗುವುದು. ಇಲ್ಲವಾದಲ್ಲಿ ಪಕ್ಷಕ್ಕೆ ಮುಜುಗರವಾಗಬಹುದು. ಅಧಿಕಾರಿಗಳು ಎಚ್ಚೆತ್ತು ನಡೆಯಬೇಕು ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.