
ಶಿರಸಿ-ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿಯ ಬದಲಾವಣೆಯ ಕುರಿತು ಹರಿದಾಡುತ್ತಿದ್ದ ಅಂದಾಜುಗಳಿಗೆ ಸ್ಪಷ್ಟನೆ ನೀಡಿದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಮತ್ತು ಹಳಿಯಾಳದ ಶಾಸಕ ಆರ್.ವಿ. ದೇಶಪಾಂಡೆ, “ರಾಜ್ಯದಲ್ಲಿ ಮುಖ್ಯಮಂತ್ರಿಯ ಸ್ಥಾನ ಖಾಲಿ ಎಂಬುದು ಸಂಪೂರ್ಣ ತಪ್ಪು ಕಲ್ಪನೆ” ಎಂದು ಹೇಳಿದ್ದಾರೆ.

ಶಿರಸಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,
“ನಾನು ಸಚಿವ ಸ್ಥಾನಕ್ಕಾಗಿ ಯಾರನ್ನೂ ಭೇಟಿಯಾಗಿಲ್ಲ, ಅಂತಹ ಬೇಡಿಕೆಯನ್ನೂ ಇಟ್ಟಿಲ್ಲ. ಪಕ್ಷ ಯಾವ ಜವಾಬ್ದಾರಿಯನ್ನು ನೀಡಿದರೂ ಅದನ್ನು ನಿಷ್ಕೃಯವಾಗಿ ನಿರಾಕರಿಸುವ ಪ್ರಶ್ನೆಯೇ ಇಲ್ಲ” ಎಂದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗೆ ತೆರೆ ಬಿದ್ದಿರುವುದನ್ನು ಉಲ್ಲೇಖಿಸಿದ ದೇಶಪಾಂಡೆ,
“ಮುಖ್ಯಮಂತ್ರಿಯ ಆಯ್ಕೆಯು ಸಂಪೂರ್ಣವಾಗಿ ಪಕ್ಷದ ಹೈಕಮಾಂಡ್ ವ್ಯಾಪ್ತಿಯ ವಿಷಯ. ಅಂತಿಮ ತೀರ್ಮಾನವೂ ಅವರದ್ದೇ” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು,“ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಮಾತು ವಾಸ್ತವವಲ್ಲ. ಜನರ ನಿರೀಕ್ಷೆಗಳು ಹೆಚ್ಚಾಗಿರುವುದರಿಂದ ಕೆಲಸಗಳು ನಿಧಾನವಾಗಿ ಕಾಣಬಹುದು. ಆದರೆ ಎಲ್ಲಾ ಕ್ಷೇತ್ರಗಳಿಗೆ ಅಗತ್ಯ ಅನುದಾನ ಒದಗಿಸಲಾಗಿದೆ ಮತ್ತು ಯೋಜನೆಗಳು ಜಾರಿಗೆ ಬರುತ್ತಿವೆ. ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಪರಿಚಯಿಸಿದ ಐದು ಭರವಸೆ ಯೋಜನೆಗಳು ಜನರ ಜೀವನಮಟ್ಟ ಸುಧಾರಿಸಲು ಸಹಕಾರಿಯಾಗಿದೆ” ಎಂದು ಅಭಿಪ್ರಾಯಪಟ್ಟರು.

