
ಭಟ್ಕಳ-ಸಿದ್ದಾಪುರದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದ ಪರಿಣಾಮ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾದ ಕುಮಟಾದ ರಮೇಶ್ ಪಟಗಾರ ಅವರ ಚಿಕಿತ್ಸಾ ವೆಚ್ಚವನ್ನು ಭರಿಸಲು ಸ್ಥಳೀಯ ಸಂಘಟನೆಗಳು ಮುಂದಾಗಿದ್ದು, ಸರ್ಕಾರದ ಸಹಾಯಕ್ಕಾಗಿ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ಗಮನಕ್ಕೆ ವಿಷಯವನ್ನು ತಂದಿವೆ.

ಭಟ್ಕಳ ಆಡಳಿತ ಸೌಧದಲ್ಲಿ ಸಚಿವರನ್ನು ಭೇಟಿ ಮಾಡಿದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಪ್ರತಿನಿಧಿ ಆಗ್ನೇಲ್ ರೋಡ್ರಿಗಸ್ ಅವರು ರಮೇಶ್ ಅವರ ಆರೋಗ್ಯ ಸ್ಥಿತಿ ಹಾಗೂ ಚಿಕಿತ್ಸೆಗೆ ಬಿದ್ದಿರುವ ಭಾರದ ವೈದ್ಯಕೀಯ ವೆಚ್ಚದ ಬಗ್ಗೆ ವಿವರಿಸಿದರು. ರೋಡ್ರಿಗಸ್ ಅವರ ಮಾಹಿತಿಯ ಪ್ರಕಾರ, ಹಾವು ಕಚ್ಚಿದ ನಂತರ ರಮೇಶ್ ಅವರಿಗೆ ರಕ್ತದ ಒತ್ತಡ ತೀವ್ರವಾಗಿ ಏರಿದ್ದರಿಂದ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸುಮಾರು ₹7 ಲಕ್ಷ ವೆಚ್ಚವಾಗಿದೆ. ಈ ಬಿಲ್ಲನ್ನು ಭರಿಸಲು ಕುಟುಂಬ ಸಂಪೂರ್ಣ ಸಂಕಷ್ಟದಲ್ಲಿದೆ.
ಸ್ಥಿತಿಯ ಬಗ್ಗೆ ತಿಳಿದ ಮಂಕಾಳು ವೈದ್ಯ ಅವರು,
ಮಂಗಳೂರು ಎ.ಜೆ. ಆಸ್ಪತ್ರೆಯೊಂದಿಗೆ ನೇರವಾಗಿ ಮಾತನಾಡಿ ಅಗತ್ಯ ಸಹಕರಣೆ ಒದಗಿಸುವೆ,
ವೈಯಕ್ತಿಕ ಮಟ್ಟದಲ್ಲೂ ಸಹಾಯ ಮಾಡುವೆ,
ಜೊತೆಗೆ ಸರ್ಕಾರದ ಪರಿಹಾರ ಯೋಜನೆಗಳಿಂದ ಸಹಾಯ ದೊರಕುವಂತೆ ಕ್ರಮ ಕೈಗೊಳ್ಳುವೆ
ಎಂದು ಭರವಸೆ ನೀಡಿದರು.

ಈ ಸಂಬಂಧ ಆರೋಗ್ಯ ಸಚಿವರಿಗೂ ಪತ್ರ ಬರೆದಿರುವುದಾಗಿ ರೋಡ್ರಿಗಸ್ ತಿಳಿಸಿದರು.
ಭೇಟಿಯ ವೇಳೆ ರಮೇಶ್ ಅವರ ಮಗ ನಿತಿನ್, ಚಿಕ್ಕಪ್ಪ ಗಣಪತಿ ಪಟಗಾರ, ಸಮಾಜ ಸೇವಕ ಸುಧಾಕರ್ ನಾಯ್ಕ, ನಿವೃತ್ತ ಅಧಿಕಾರಿ ನಾಗೇಶ್ ಹಾಜರಿದ್ದರು.
