
ಕಾರವಾರ: ಇತ್ತೀಚೆಗೆ ರೂಪುಗೊಂಡಿರುವ ಮಂಕಿ ಪಟ್ಟಣ ಪಂಚಾಯಿತಿಯ 20 ವಾರ್ಡುಗಳಿಗೆ ಡಿಸೆಂಬರ್ 21ರಂದು ಮತದಾನ ನಡೆಯುವ ವೇಳಾಪಟ್ಟಿಯನ್ನು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಬಿಡುಗಡೆ ಮಾಡಿದ್ದಾರೆ.

ಪ್ರಕಟಿಸಿರುವ ವಿವರಗಳ ಪ್ರಕಾರ, ಡಿಸೆಂಬರ್ 2ರಂದು ಅಧಿಕೃತ ಚುನಾವಣಾ ಅಧಿಸೂಚನೆ ಹೊರಬೀಳಲಿದೆ. ನಾಮಪತ್ರ ಸಲ್ಲಿಕೆಗೆ ಡಿಸೆಂಬರ್ 9ರವರೆಗೆ ಅವಕಾಶ ಇದ್ದು, ಮುಂದಿನ ದಿನವಾದ ಡಿ.10ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.ಉಮೇದುವಾರರು ತಮ್ಮ ನಾಮಪತ್ರ ಹಿಂತೆಗೆದುಕೊಳ್ಳಲು ಡಿ.12 ಕೊನೆಯ ದಿನ ಎಂದು ತಿಳಿಸಲಾಗಿದೆ.

ಅವಶ್ಯಕತೆ ಇದ್ದರೆ ಡಿಸೆಂಬರ್ 21ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, ಮತ ಎಣಿಕೆ ಡಿಸೆಂಬರ್ 25ರಂದು ತಹಶೀಲ ಕಚೇರಿ ಪ್ರದೇಶದಲ್ಲಿ ಏರ್ಪಡಿಸಲಾಗಿದೆ ಎಂದು ತಿಳಿಸಲಾಗಿದೆ.

