
ಭಟ್ಕಳ: ಪಾರಂಪರಿಕ ಅರಣ್ಯವಾಸಿಗಳ ಹಕ್ಕುಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಭಟ್ಕಳದಲ್ಲಿ ಜಿಲ್ಲಾ ಮಟ್ಟದ ಕಾನೂನು ಜಾಗೃತಿ ಜಾಥಕ್ಕೆ ಮಂಗಳವಾರ ಚಾಲನೆ ದೊರೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ, “ಸಾಗುವಳಿ ಹಕ್ಕು ಮಾನ್ಯಗೊಳಿಸುವ ಸಂದರ್ಭದಲ್ಲಿ ಮೂರು ತಲೆಮಾರಿನ ದಾಖಲೆಗಳನ್ನು ಕಡ್ಡಾಯಗೊಳಿಸುವುದು ಅರಣ್ಯ ಹಕ್ಕು ಕಾಯ್ದೆಯ ಆತ್ಮಕ್ಕೇ ವಿರುದ್ಧ” ಎಂದು ಸ್ಪಷ್ಟಪಡಿಸಿದರು.
ಉಪವಿಭಾಗಾಧಿಕಾರಿ ಕಾವ್ಯಾರಾಣಿ ಹೊರಗಿದ್ದರಿಂದ, ಮನವಿಯನ್ನು ಸ್ಥಳೀಯ ತಹಶೀಲ್ದಾರ ನಾಗೇಂದ್ರ ಕೆ.ಎಸ್. ಅವರಿಗೆ ಜಾಥಾ ಸದಸ್ಯರು ಹಸ್ತಾಂತರಿಸಿದರು.
ರವೀಂದ್ರ ನಾಯ್ಕ ಅವರು,
2012ರಲ್ಲಿ ನಡೆದ ಕಾಯಿದೆ ತಿದ್ದುಪಡಿ,
ಗುಜರಾತ್ ಹೈಕೋರ್ಟ್ ನೀಡಿದ ಸ್ಪಷ್ಟೀಕರಣಗಳು ಮತ್ತು
ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ನಿರ್ದೇಶನಗಳನ್ನೂ ಉಲ್ಲೇಖಿಸಿದರು.

ಅವರ ಮಾತಿನಲ್ಲಿ, “ಸಾಗುವಳಿ ಪ್ರದೇಶದಲ್ಲಿ ವಾಸವಿದ್ದ ವಿಷಯವೇ ಪ್ರಮುಖವಾಗಿದ್ದು, ಮೂರು ತಲೆಮಾರಿನ ದಾಖಲೆಗಳನ್ನು ಬೇಡುವುದು ಅನಾವಶ್ಯಕ. ದಾಖಲೆ ಕೊರತೆ ಆಧಾರದ ಮೇಲೆ ಅರ್ಜಿಗಳನ್ನು ತಿರಸ್ಕರಿಸುವುದು ನಿಯಮಬಾಹಿರ” ಎಂದು ಹೇಳಿದರು.
ರಾಜ್ಯ ಮಟ್ಟದಲ್ಲಿ ಶೇಕಡಾ 88.90% ಹಾಗೂ ಜಿಲ್ಲೆಯಲ್ಲಿ ಶೇಕಡಾ 83.50% ಅರ್ಜಿಗಳು ತಿರಸ್ಕೃತವಾಗಿರುವುದು ತಪ್ಪಾದ ಪರಿಶೀಲನಾ ವಿಧಾನಗಳ ಪರಿಣಾಮ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕರಾದ ಪಾಂಡುರಂಗ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ನಡೆಸಿದರು.
ದೇವರಾಜ ಗೊಂಡ ಕೃತಜ್ಞತೆ ಸಲ್ಲಿಸಿದರು.
ಇಬ್ರಾಹೀಂ ಗೌಡಳ್ಳಿ, ರಫೀಕ್, ನವೀನ್ ಜೈನ್, ರತ್ನ ನಾಯ್ಕ, ಚಂದ್ರ ನಾಯ್ಕ, ಈಶ್ವರ ನಾಯ್ಕ, ಕವಿತಾ ಗೋಂಡ, ನಾಗಮ್ಮ ಮೋಗೇರ, ದತ್ತ ನಾಯ್ಕ, ಸಬೀರ್, ಜಮಾವೀರ್ ಸೇರಿದಂತೆ ಹಲವರು ಭಾಗವಹಿಸಿದರು.
ಜಿಲ್ಲಾ ಮಟ್ಟದ ಜಾಗೃತಿ: 132 ಗ್ರಾಮ ಪಂಚಾಯತ್‌ಗಳಲ್ಲಿ ಕಾರ್ಯಕ್ರಮ
ಅರಣ್ಯವಾಸಿಗಳಲ್ಲಿ ಕಾನೂನು ಅರಿವು ಹೆಚ್ಚಿಸಲು ಜಿಲ್ಲಾದ್ಯಂತ 132 ಗ್ರಾಮ ಪಂಚಾಯತ್‌ಗಳಲ್ಲಿ ವಿಶೇಷ ಜಾಗೃತಿ ಸಭೆಗಳನ್ನು ಹಮ್ಮಿಕೊಳ್ಳುವುದಾಗಿ ವೇದಿಕೆ ತಿಳಿಸಿದೆ.

ಮೂರು ಲಕ್ಷ ಕರಪತ್ರ ವಿತರಣೆ
ಸಾಗುವಳಿ ಹಕ್ಕಿಗೆ ಬೇಕಾಗಿರುವ ಒಂಬತ್ತು ಅಗತ್ಯ ದಾಖಲೆಗಳ ಪಟ್ಟಿ ಹಾಗೂ ದಾಖಲೆ ಒತ್ತಾಯಿಸುವ ತಪ್ಪು ಕ್ರಮಗಳ ಬಗ್ಗೆ ಮಾಹಿತಿ ಒಳಗೊಂಡ ಮೂರು ಲಕ್ಷ ಕರಪತ್ರಗಳನ್ನು ವಿತರಣೆ ಮಾಡಲಾಗುವುದು ಎಂದು ಅಧ್ಯಕ್ಷರು ಮಾಹಿತಿ ನೀಡಿದರು.

