
ಭಟ್ಕಳ-ಭಟ್ಕಳಉಪವಿಭಾಗಾಧಿಕಾರಿ ಕಚೇರಿಯ ಪ್ರಭಾರ ಹಾಗೂ ಶಿರಸಿ ಸಹಾಯಕ ಆಯುಕ್ತೆಯಾಗಿದ್ದ ಕೆ. ಕಾವ್ಯರಾಣಿ ಅವರಿಗೆ ಸರ್ಕಾರವು ಹೊಸ ನೇಮಕಾತಿ ಆದೇಶ ಹೊರಡಿಸಿದ್ದು, ಅವರನ್ನು ಮೈಸೂರಿನ ಹಣಸೂರು ಉಪವಿಭಾಗಕ್ಕೆ ವರ್ಗಾಯಿಸಲಾಗಿದೆ.

ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ಬಳಿಕ ಕಠಿಣ ಪರಿಶ್ರಮದಿಂದ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕಾವ್ಯರಾಣಿ 2019ರಲ್ಲಿ ಸರ್ಕಾರಿ ಸೇವೆಯನ್ನು ಪ್ರಾರಂಭಿಸಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ವೀರೇಶ ನಾಯ್ಕ ಅವರ ಪುತ್ರಿಯಾಗಿರುವ ಅವರು ಬಾಲ್ಯದಲ್ಲೇ ಉನ್ನತ ಹುದ್ದೆಯ ಕನಸು ಕಂಡು ಅದರತ್ತ ದೃಢವಾಗಿ ಪಯಣಿಸಿದ್ದರು.

ಸೇವೆಯಲ್ಲಿ ಸೇರಿದ ನಂತರ ಅನೇಕ ಶಾಲೆಗಳಿಗೆ ಅಚಾನಕ್ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿ ಗಮನ ಸೆಳೆದಿದ್ದರು. ಆಡಳಿತ ಕ್ರಮಗಳಲ್ಲಿ ಶಿಸ್ತುಬದ್ಧ ಮತ್ತು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರಿಯಾಗಿ ಕೂಡ ಅವರು ಹೆಸರಾಗಿದ್ದರು.

ಕಳೆದ ವರ್ಷ ಶಿರಸಿ ಸಹಾಯಕ ಆಯುಕ್ತೆಯ ಜವಾಬ್ದಾರಿ ಸ್ವೀಕರಿಸಿದ್ದ ಕಾವ್ಯರಾಣಿ, ಅದೇ ಸಮಯದಲ್ಲಿ ಭಟ್ಕಳ ಉಪವಿಭಾಗಾಧಿಕಾರಿ ಕಚೇರಿಯ ಪ್ರಭಾರವನ್ನೂ ನಿರ್ವಹಿಸುತ್ತಿದ್ದರು. ಇದೀಗ ಆಡಳಿತಾತ್ಮಕ ಕಾರಣಗಳಿಂದ ಅವರನ್ನು ಬೇರೆಡೆ ನಿಯೋಜಿಸಲಾಗಿದೆ.
ಶಿರಸಿ ಮತ್ತು ಭಟ್ಕಳಕ್ಕೆ ಹೊಸ ಸಹಾಯಕ ಆಯುಕ್ತರ ನೇಮಕಾತಿ ಆದೇಶ ಇನ್ನೂ ಪ್ರಕಟಗೊಂಡಿಲ್ಲ.

