
ಭಟ್ಕಳ: ಕುಡಿಯಲು ನೀರು ಬೇಕೆಂದು ಮನೆ ಬಾಗಿಲಿಗೆ ಬಂದ ಇಬ್ಬರು ಅಪರಿಚಿತರು ವೃದ್ಧೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆಯ ಗರಡಿಹಿತ್ಲು ಪ್ರದೇಶದಲ್ಲಿ ನಡೆದಿದೆ.ಘಟನೆಯಲ್ಲಿ ಗರಡಿಹಿತ್ಲು ನಿವಾಸಿ ಹೊನ್ನಮ್ಮ ಮಹಾದೇವ ನಾಯ್ಕ (70) ಅವರು ಚಿನ್ನದ ಸರ ಕಳೆದುಕೊಂಡಿದ್ದಾರೆ.

ಮಾಸ್ಕ್ ಧರಿಸಿ ಬೈಕ್‌ನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು, ವಿಳಾಸ ಕೇಳುವ ನೆಪದಲ್ಲಿ ವೃದ್ಧೆಯನ್ನು ಸಂಪರ್ಕಿಸಿದ್ದಾರೆ. ತಾವು ಕೊರಿಯರ್ ಸಿಬ್ಬಂದಿ ಎಂದು ಹೇಳಿಕೊಂಡ ಅವರು, ನಿರ್ದಿಷ್ಟ ವ್ಯಕ್ತಿಯೊಬ್ಬರ ಹೆಸರನ್ನು ಉಲ್ಲೇಖಿಸಿ ವಿಳಾಸ ವಿಚಾರಿಸಿದ್ದಾರೆ. ಆ ಹೆಸರುಳ್ಳ ವ್ಯಕ್ತಿ ಈ ಪ್ರದೇಶದಲ್ಲಿ ಇಲ್ಲ ಎಂದು ವೃದ್ಧೆ ತಿಳಿಸಿದ ಬಳಿಕ, ಅವರು ಕುಡಿಯಲು ನೀರು ಕೇಳಿದ್ದಾರೆ.

ವೃದ್ಧೆ ನೀರು ತಂದು ನೀಡಿದ ನಂತರ, ಮತ್ತೊಮ್ಮೆ ನೀರು ಬೇಕೆಂದು ಕೇಳಿದ ಆರೋಪಿಗಳು, ಆ ಸಮಯದಲ್ಲಿ ಅವಕಾಶವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ವೃದ್ಧೆ ಒಳಗೆ ಹೋಗಿದ್ದ ವೇಳೆ ಬೈಕ್‌ನ ಹಿಂಬದಿ ಕುಳಿತಿದ್ದ ವ್ಯಕ್ತಿ ಏಕಾಏಕಿ ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಸರವನ್ನು ಎಳೆದು ಕಸಿದುಕೊಂಡಿದ್ದಾನೆ.

ಅಚಾನಕ್ ನಡೆದ ಘಟನೆಯಿಂದ ವೃದ್ಧೆ ನೆಲಕ್ಕುರುಳಿದ್ದು, ಈ ನಡುವೆ ಆರೋಪಿಗಳು ಬೈಕ್‌ನಲ್ಲಿ ಸ್ಥಳದಿಂದ ವೇಗವಾಗಿ ಪರಾರಿಯಾಗಿದ್ದಾರೆ. ವೃದ್ಧೆಯ ಕೂಗು ಕೇಳಿ ಸ್ಥಳೀಯರು ಆರೋಪಿಗಳನ್ನು ಬೆನ್ನಟ್ಟಲು ಪ್ರಯತ್ನಿಸಿದರೂ, ಅವರು ಶಿರೂರು ಟೋಲ್‌ಗೇಟ್ ಮಾರ್ಗವಾಗಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಡಿವೈಎಸ್ಪಿ ಮಹೇಶ್, ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಂಡಿದೆ.

