
ಭಟ್ಕಳ: ಮಂಗಳವಾರ ಬೆಳಗಿನ ಜಾವ ಭಟ್ಕಳ ತಹಸೀಲ್ದಾರ್ ಕಚೇರಿಗೆ ಸಂಬಂಧಿಸಿದಂತೆ ಬಂದಿರುವ ಹುಸಿ ಬಾಂಬ್ ಸ್ಫೋಟದ ಬೆದರಿಕೆ ಸಂದೇಶವು ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ. ಬೆಳಗ್ಗೆ ಸುಮಾರು 7.25ರ ವೇಳೆಗೆ ಅನಾಮಿಕ ವ್ಯಕ್ತಿಯೊಬ್ಬರಿಂದ ಈಮೇಲ್ ಮೂಲಕ ಎಚ್ಚರಿಕೆ ರವಾನೆಯಾಗಿರುವುದು ತಿಳಿದುಬಂದಿದೆ.

ಸಂದೇಶದಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ಶೀಘ್ರದಲ್ಲೇ ಬಾಂಬ್ ಸ್ಫೋಟ ಸಂಭವಿಸಬಹುದೆಂದು ಹೇಳಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲರನ್ನು ತಕ್ಷಣ ಸ್ಥಳದಿಂದ ತೆರವುಗೊಳಿಸುವಂತೆ ಕನ್ನಡ ಭಾಷೆಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಪೊಲೀಸ್ ಭದ್ರತೆ, ಬಾಂಬ್–ಡಾಗ್ ಸ್ಕ್ವಾಡ್ ತಪಾಸಣೆ
ಈ ಮಾಹಿತಿಯ ಬೆನ್ನಲ್ಲೇ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ತಹಸೀಲ್ದಾರ್ ಕಚೇರಿ ಆವರಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಶಂಕಿತ ವಸ್ತುಗಳ ಪತ್ತೆಗಾಗಿ ಬಾಂಬ್ ಪತ್ತೆ ದಳ ಹಾಗೂ ಶ್ವಾನ ದಳವನ್ನು ಕರೆಸಿಕೊಂಡು ಸಂಪೂರ್ಣ ಪರಿಶೀಲನೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಈಮೇಲ್‌ನಲ್ಲಿ ರಾಜಕೀಯ ಆರೋಪಗಳ ಸರಮಾಲೆ
ಬಾಂಬ್ ಬೆದರಿಕೆಯ ಜೊತೆಗೆ, ಆ ಅನಾಮಿಕ ಈಮೇಲ್‌ನಲ್ಲಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಉಲ್ಲೇಖಿಸಲಾಗಿದೆ. ಯಾವುದೇ ಪುರಾವೆ ಇಲ್ಲದೆ ರಾಜಕೀಯ ನಾಯಕರು, ಅಧಿಕಾರಿಗಳು ಹಾಗೂ ಕೆಲವು ಅಪ್ಲಿಕೇಶನ್‌ಗಳ ಹೆಸರನ್ನು ಬಳಸಿ ಆರೋಪಗಳನ್ನು ಮಾಡಲಾಗಿದೆ.
ಇದಲ್ಲದೆ, ಮಾಧ್ಯಮ ಹತ್ತಿಕ್ಕುವ ಯತ್ನ, ಗೂಡಾಚಾರಿಕೆ ಸೇರಿದಂತೆ ಸಮಾಜಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಉಲ್ಲೇಖಿಸಿ ಉಗ್ರ ಶೈಲಿಯಲ್ಲಿ ಸಂದೇಶ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಆರೋಪಗಳ ನಿಜಾಸತ್ಯತೆ ಕುರಿತು ಅಧಿಕೃತವಾಗಿ ಯಾವುದೇ ದೃಢೀಕರಣ ಲಭ್ಯವಾಗಿಲ್ಲ.
ತನಿಖೆ ಆರಂಭ
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಈಮೇಲ್ ಕಳುಹಿಸಿದವರ ಪತ್ತೆಗೆ ಸೈಬರ್ ಕ್ರೈಂ ವಿಭಾಗದ ಸಹಕಾರದೊಂದಿಗೆ ತನಿಖೆ ಆರಂಭಿಸಿದೆ. ಜನರು ಆತಂಕ ಪಡದೇ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

